ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನಿರ್ವಹಣೆ: ಕರ್ನಾಟಕದ ಲೋಪ

ಕೇಂದ್ರ ಸರ್ಕಾರದ ಪರಿಣತರ ತಂಡದಿಂದ ವರದಿ
Last Updated 29 ಅಕ್ಟೋಬರ್ 2020, 19:33 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿರುವುದೇ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣ ಎಂದು ಕೇಂದ್ರದ ಪರಿಣತರ ತಂಡ ಹೇಳಿದೆ.

ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದ್ದ ಕರ್ನಾಟಕ, ರಾಜಸ್ಥಾನ, ಛತ್ತೀಸಗಡ, ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರವು ಇತ್ತೀಚೆಗೆ ಪರಿಣತರ ತಂಡವನ್ನು ಕಳುಹಿಸಿತ್ತು. ಸಾಂಕ್ರಾಮಿಕವನ್ನು ರಾಜ್ಯ ಸರ್ಕಾರಗಳು ಹೇಗೆ ನಿಭಾಯಿಸುತ್ತಿವೆ ಎಂಬುದರ ಪರಾಮರ್ಶೆ ನಡೆಸಲು ಈ ತಂಡಕ್ಕೆ ಸೂಚಿಸಲಾಗಿತ್ತು.

ಕೇಂದ್ರ ತಂಡದ ವರದಿಯ ಪ್ರತಿಯನ್ನು ಕರ್ನಾಟಕದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರಿಗೆ ಕಳುಹಿಸಿಕೊಡಲಾಗಿದ್ದು, ರಾಜ್ಯ ಅಳವಡಿಸಿಕೊಂಡ ವಿಧಾನದಲ್ಲಿನ ಹಲವು ಲೋಪಗಳನ್ನು ಇದರಲ್ಲಿ ಗುರುತಿಸಲಾಗಿದೆ.

ಕೋವಿಡ್‌ ಮೇಲಿನ ನಿಗಾ ಮತ್ತು ಸಂಪರ್ಕ ಪತ್ತೆ ಕ್ರಮಗಳು ಇತ್ತೀಚೆಗೆ ತೃಪ್ತಿಕರವಾಗಿ ಇಲ್ಲ. ಪ್ರಾಥಮಿಕ ಸಂಪರ್ಕ ಪತ್ತೆ ವಿಚಾರದಲ್ಲಿ ಜೂನ್‌ ಕೊನೆಯವರೆಗೆ ಕರ್ನಾಟಕ ಸರ್ಕಾರದ ಕೆಲಸ ಶ್ಲಾಘನೀಯವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸಂಪರ್ಕ ಪತ್ತೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಸಂಪರ್ಕ ಪತ್ತೆಯಲ್ಲಿ ಅಸಡ್ಡೆ ಇದೆ. ಇದು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಲೋಪ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರು, ಕಲಬುರ್ಗಿ ಮತ್ತು ಬಳ್ಳಾರಿಗೆ ತಂಡವು ಭೇಟಿ ನೀಡಿತ್ತು. ತಂಡದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ (ರಾಜ್ಯಕ್ಕೆ ನೋಡಲ್‌ ಅಧಿಕಾರಿ), ಸಾರ್ವಜನಿಕ ಆರೋಗ್ಯ ಪರಿಣತರು ಇದ್ದರು.

ಕೋವಿಡ್‌ ರೋಗಿಗಳ ಬಗೆಗಿನ ದಾಖಲೆ ನಿರ್ವಹಣೆಯಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳು ವಿಫಲ
ರಾಗಿದ್ದಾರೆ. ಗುಣಮುಖರಾದ ಬಳಿಕ ರೋಗಿಗಳಿಗೆ ಎದುರಾಗುವ ಅನಾರೋಗ್ಯ ಸಮಸ್ಯೆಗಳ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆಯು ಗಮನ ಹರಿಸಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ರೋಗ ಲಕ್ಷಣಗಳು ಇಲ್ಲದ ಕೆಲವು ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ. ಆದರೆ, ಈ ಪ್ರಕರಣಗಳನ್ನು ಕೋವಿಡ್‌ ಪ್ರಕರಣಗಳು ಎಂದು ಪರಿಗಣಿಸಲಾಗಿಲ್ಲ. ನಿರ್ದಿಷ್ಟ ಪ್ರದೇಶದಲ್ಲಿ 20 ಪ್ರಕರಣಗಳು ವರದಿಯಾಗಿದ್ದರೆ ಮಾತ್ರ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸುವ ರಾಜ್ಯದ ನಿರ್ಧಾರದ ಬಗ್ಗೆಯೂ ಪರಿಣತರ ತಂಡವು ಅಸಮಾಧಾನ ವ್ಯಕ್ತಪಡಿಸಿದೆ. ಪ್ರದೇಶವೊಂದನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲು 20 ಪ್ರಕರಣಗಳು ವರದಿಯಾಗುವವರೆಗೆ ಕಾಯುವ ಅಗತ್ಯವೇನೂ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೋವಿಡ್‌ ತಡೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ರಾಜ್ಯಕ್ಕೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT