ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಸಾಧನೆಗೆ ಶುಭಾಶಯಗಳ ಮಹಾಪೂರ: ವಿಶ್ವದ ಎಲ್ಲೆಡೆಯಿಂದ ಪ್ರಧಾನಿಗೆ ಅಭಿನಂದನೆ

Last Updated 21 ಅಕ್ಟೋಬರ್ 2021, 19:50 IST
ಅಕ್ಷರ ಗಾತ್ರ

ಜಿನೀವಾ/ಜೆರುಸಲೇಂ/ನವದೆಹಲಿ (ಪಿಟಿಐ): ಕೋವಿಡ್ ಲಸಿಕೆಯ 100 ಕೋಟಿ ಮೈಲಿಗಲ್ಲು ಸಾಧಿಸಿದ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಅಮೆರಿಕ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆ ಸಿಕ್ಕಿದೆ.

ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. ಸಾಂಕ್ರಾಮಿಕದಿಂದ ದೇಶದ ಜನರನ್ನು ರಕ್ಷಿಸಲು ಹಾಗೂ ಯೋಜಿತ ಗುರಿಯನ್ನು ಸಾಧಿಸುವಲ್ಲಿ ತೋರಿದ ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.

ಅಮೆರಿಕದ ವಿದೇಶಾಂಗಉಪ ಕಾರ್ಯದರ್ಶಿ ವೆಂಡಿ ಶೆರ್ಮನ್ ಕೂಡ ಭಾರತವನ್ನು ಅಭಿನಂದಿಸಿದ್ದಾರೆ. ರಫ್ತು ಮಾಡುವ ಉದ್ದೇಶದಿಂದ ಲಸಿಕೆ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿರುವ ಭಾರತದ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ.

ಭೂತಾನ್ ಪ್ರಧಾನಿ ಡಾ ಲೊಟೇ ಶೆರಿಂಗ್ ಅವರು, ‘ಈ ಸಾಧನೆ ಕೇವಲ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೆ ಒಂದು ದೊಡ್ಡ ಸಾಧನೆ’ ಎಂದಿದ್ದಾರೆ. ಭೂತಾನ್ ಜನರ ಪರವಾಗಿ ಭಾರತವನ್ನು ಅಭಿನಂದಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭೂತಾನ್ ವಿದೇಶಾಂಗ ಸಚಿವರೂ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಈ ಬೃಹತ್ ಕಾರ್ಯವನ್ನು ಸಾಧಿಸಿದ್ದಕ್ಕಾಗಿಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಮೋದಿ, ವೈದ್ಯಕೀಯ ಸಮುದಾಯ ಮತ್ತು ಮುಂಚೂಣಿ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.ಭಾರತ-ಲಂಕಾ ಸಂಬಂಧಗಳನ್ನು ಮುನ್ನಡೆಸಲು ಶ್ರೀಲಂಕಾ ಪ್ರಧಾನಿಯವರ ಮಾರ್ಗದರ್ಶನ ಮತ್ತು ಬೆಂಬಲ ಪ್ರಮುಖವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಇದಕ್ಕೆ ಪ್ರತಿಕ್ರಿಯೆ
ನೀಡಿದೆ.

100 ಕೋಟಿ ಡೋಸ್ ಮೈಲಿಗಲ್ಲು ಸಾಧಿಸಲು ಕಾರಣರಾದ ಪ್ರಧಾನಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶ್ಲಾಘಿಸಿದೆ. ‘ಪಾಶ್ಚಿಮಾತ್ಯ ದೇಶಗಳು ಶೇ 2.5ಕ್ಕಿಂತ ಹೆಚ್ಚು ಕೋವಿಡ್ ಮರಣ ಪ್ರಮಾಣ ದಾಖಲಿಸಿರುವಾಗ, ಭಾರತವು ನಾಯಕತ್ವ, ಬಾಧ್ಯತೆ, ಆಧುನಿಕ ವೈದ್ಯಕೀಯ ಶಕ್ತಿಯ ಮೂಲಕ ಆರೋಗ್ಯ ಸಚಿವಾಲಯದ ಪ್ರಯತ್ನದಿಂದ ಮರಣ ಪ್ರಮಾಣವನ್ನು ಶೇ 1.4ಕ್ಕಿಂತ ಕಡಿಮೆ ಮಾಡಿತು’ ಎಂದು ಐಎಂಎ ತಿಳಿಸಿದೆ.

ದೇಶಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಿ, ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯಲು ಭಾರತದ ಈ ಸಾಧನೆ ಸಹಾಯ ಮಾಡುತ್ತದೆ ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ. ಆರೋಗ್ಯ ವಲಯವೂ ಪ್ರಧಾನಿಯನ್ನು ಶ್ಲಾಘಿಸಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಸಿಇಒ ಅದರ್ ಪೂನಾವಾಲಾ ಅವರು ಈ ಮೈಲಿಗಲ್ಲು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ, ವಿವಿಧ ಸಚಿವಾಲಯಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.

ಭಾರತ್‌ ಬಯೊಟೆಕ್‌ನ ಸುಚಿತ್ರ ಎಲ್ಲ, ಬಯೊಕಾನ್ ಮುಖಸ್ಥೆ ಕಿರಣ್ ಮಜುಂದಾರ್ ಶಾ, ಅಪೋಲೋ, ಫೋರ್ಟಿಸ್ ಸೇರಿದಂತೆ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು ಸರ್ಕಾರವನ್ನು ಅಭಿನಂದಿಸಿದ್ದಾರೆ.

ವಿಶ್ವದಾದ್ಯಂತ ಕೋವಿಡ್ -19 ಲಸಿಕೆಗಳನ್ನು ಒದಗಿಸಲು ‘ಲಸಿಕೆ ಮೈತ್ರಿ’ ಎಂಬ ಕಾರ್ಯಕ್ರಮವನ್ನು ಜನವರಿ 26ರಂದು ಕೇಂದ್ರ ಸರ್ಕಾರ ಆರಂಭಿಸಿತ್ತು. ಇದರ ಅಡಿಯಲ್ಲಿಕೆನಡಾ, ಬ್ರಿಟನ್, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಬ್ರೆಜಿಲ್, ನೇಪಾಳ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಬಹರೇನ್‌ ಸೇರಿದಂತೆ 95 ದೇಶಗಳಿಗೆ ಭಾರತವು ಸುಮಾರು 6.63 ಕೋಟಿ ಡೋಸ್ ಲಸಿಕೆಗಳನ್ನು ಪೂರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT