ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರದ ಪರಿಶೀಲನೆ

ದೇಶದಲ್ಲಿ ಒಂದೇ ದಿನ 35 ಸಾವಿರ ಪ್ರಕರಣ
Last Updated 18 ಮಾರ್ಚ್ 2021, 20:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೋವಿಡ್‌–19 ಸೋಂಕು ಹೆಚ್ಚುತ್ತಿದ್ದು, ಗುರುವಾರ ಒಂದೇ ದಿನ 35,871 ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 102 ದಿನಗಳಲ್ಲಿ ದೃಢಪಟ್ಟ ಅತಿ ಹೆಚ್ಚು ಪ್ರಕರಣಗಳಾಗಿವೆ.

ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ಲಸಿಕೆ ಹಾಕುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

‘ಎರಡನೇ ಅಲೆ ಹಬ್ಬುವ ಭೀತಿ ಮತ್ತು ರಾಜ್ಯ ಸರ್ಕಾರಗಳ ಬೇಡಿಕೆಗೆ ಅನುಗುಣವಾಗಿ ಲಸಿಕೆ ಹಾಕುವ ವ್ಯಾಪ್ತಿಯನ್ನು ಹೆಚ್ಚಿಸಬೇಕಾಗಿದೆ. ಆದರೆ, ಈಗಿರುವ ನಿರ್ಬಂಧವನ್ನು ತೆಗೆದು ಹಾಕಿದರೆ ತಯಾರಕರಿಂದ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುವುದೇ ಎನ್ನುವ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಲಸಿಕೆ ಕುರಿತಾದ ರಾಷ್ಟ್ರೀಯ ತಜ್ಞರ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಲಸಿಕೆ ಹಾಕುವ ವ್ಯಾಪ್ತಿಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿ ವಯೋಮಾನದ ಆಧಾರದ ಮೇಲೆ ಲಸಿಕೆ ಹಾಕಬೇಕು. ಸದ್ಯಕ್ಕೆ 45 ವರ್ಷದ ಮೇಲ್ಪಟ್ಟವರಿಗೆ ನೀಡುವುದು ಸಮರ್ಪಕವಾಗಿದೆ’ ಎಂದು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗ ತಜ್ಞ ಗಿರಿಧರ್‌ ಬಾಬು ಪ್ರತಿಪಾದಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ನಿರ್ಬಂಧಗಳನ್ನು ತೆಗೆದುಹಾಕಿದರೆ ಮುಂದಿನ ಮೂರು ತಿಂಗಳಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ. ಪತ್ರಕರ್ತರು, ವಿಮಾನ ನಿಲ್ದಾಣದಲ್ಲಿನ ಕಾರ್ಮಿಕರು, ವಿದ್ಯುತ್‌ ಪೂರೈಕೆಯ ನಿರ್ವಹಣೆಯಲ್ಲಿ ತೊಡಗಿರುವವರು ಮತ್ತು ಜಗನ್ನಾಥ ದೇವಾಲಯದ ಪೂಜಾರಿಗಳಿಗೂ ಲಸಿಕೆ ಹಾಕಲು ಅವಕಾಶ ಕಲ್ಪಿಸಬೇಕು ಎಂದು ಒಡಿಶಾ ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಹೀಗಾಗಿ, ಕೋವಿಡ್‌–19ಗೆ ಲಸಿಕೆ ಹಾಕುವ ಕುರಿತಾದ ರಾಷ್ಟ್ರೀಯ ತಜ್ಞರ ತಂಡ ಈ ಹೊಸ ಪ್ರಸ್ತಾವದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದೆ.

ಈ ವಾರದ ಆರಂಭದಲ್ಲಿ ಪಂಜಾಬ್‌ನ ಲೂಧಿಯಾನ ಜಿಲ್ಲಾಡಳಿತ ಬ್ಯಾಂಕ್‌ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ಶಾಲಾ ಉದ್ಯೋಗಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಸದಸ್ಯರಿಗೆ ಮತ್ತು ಪತ್ರಕರ್ತರಿಗೆ ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ.ಸದ್ಯಕ್ಕೆ ಕೆಲ ಕಾಯಿಲೆವುಳ್ಳ 45ರಿಂದ 59 ವಯಸ್ಸಿನವರಿಗೆ ಮತ್ತು 60 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ಹಾಕಲಾಗುತ್ತಿದೆ.

3.71 ಕೋಟಿ ಮಂದಿಗೆ ಲಸಿಕೆ: ದೇಶದಲ್ಲಿ ಇದುವರೆಗೆ 3.71 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. ಲಸಿಕಾ ಕೇಂದ್ರಗಳನ್ನು ಹೆಚ್ಚಿಸಲಾಗಿದ್ದು, ಶೀಘ್ರದಲ್ಲೇ 4 ಕೋಟಿ ತಲುಪುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 75.68 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌ ನೀಡಲಾಗಿದೆ. 46.32 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್‌ ನೀಡಲಾಗಿದೆ. 77.16 ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌ ಹಾಗೂ 19.09 ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್‌ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾಯಿಲೆಪೀಡಿತರಾಗಿರುವ 45ರಿಂದ 59 ವರ್ಷದವರೆಗಿನ 24.57 ಲಕ್ಷ ಮಂದಿಗೆ ಹಾಗೂ 60 ವರ್ಷದ ಮೇಲ್ಪಟ್ಟ 1.28 ಕೋಟಿ ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ.

ಗುಜರಾತ್‌: ಶಾಲೆ, ಕಾಲೇಜುಗಳು ಬಂದ್‌:

ಅಹಮದಾಬಾದ್‌: ಗುಜರಾತ್‌ನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯದ ಎಂಟು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿನ ಶಾಲೆ ಮತ್ತು ಕಾಲೇಜುಗಳನ್ನು ಏಪ್ರಿಲ್‌ 10ರವರೆಗೆ ಮುಚ್ಚುವಂತೆ ಸರ್ಕಾರ ಸೂಚಿಸಿದೆ.

ಅಹಮದಾಬಾದ್‌, ಗಾಂಧಿನಗರ, ಸೂರತ್‌, ವಡೋದರಾ, ರಾಜಕೋಟ್‌, ಜುನಾಗಢ, ಜಾಮ್ನಗರ್‌ ಮತ್ತು ಭಾವನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಈ ಆದೇಶ ಅನ್ವಯವಾಗಲಿದೆ. ಜತೆಗೆ, ಎಲ್ಲ ಆಫ್‌ಲೈನ್‌ ಪರೀಕ್ಷೆಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಚುಡಾಸಾಮಾ ತಿಳಿಸಿದ್ದಾರೆ.

27 ವರ್ಷದ ಕಾರು ಚಾಲಕನಿಗೂ ಲಸಿಕೆ ಹಾಕಿಸಿದ ಶಾಸಕ!:

ಕಲಬುರ್ಗಿ: ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಶಾಸಕರೊಬ್ಬರು ತಮ್ಮ 27 ವರ್ಷದ ಕಾರು ಚಾಲಕನಿಗೆ ಲಸಿಕೆಕೊಡಿಸಿದ ಅಂಶ ಗುರುವಾರ ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಬಹಿರಂಗಗೊಂಡಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ ಅವರಿಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ, ‘ನಾನು ಸೇಡಂ ಶಾಸಕರ (ರಾಜಕುಮಾರ ಪಾಟೀಲ ತೆಲ್ಕೂರ) ಕಾರು ಚಾಲಕ. ಕಡಿಮೆ ವಯಸ್ಸಿದ್ದರೂ ನಾನು ಲಸಿಕೆ ಪಡೆದಿರುವೆ. ನನಗೇನಾದರೂ ತೊಂದರೆ ಆಗುವುದೇ’ ಎಂದು ಆತಂಕದಿಂದ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ರುದ್ರವಾಡಿ, ‘ಲಸಿಕೆ ಪಡೆಯುವುದರಿಂದ ಏನೂ ತೊಂದರೆ ಆಗುವುದಿಲ್ಲ. ಧೈರ್ಯವಾಗಿರು. ಹಿರಿಯರು ಹಾಗೂ ರೋಗಿಗಳಿಗೆ ಅಪಾಯ ಹೆಚ್ಚು ಎಂಬ ಕಾರಣಕ್ಕೆ ಸರ್ಕಾರ ವಯಸ್ಸಿನ ಮಿತಿ ಮಾಡಿದೆ. ಅದನ್ನು ಯಾರೂ ಮೀರಬಾರದು’ ಎಂದರು.

ಪ್ರತಿಕ್ರಿಯೆಗೆ ಶಾಸಕರು ಲಭ್ಯರಾಗಲಿಲ್ಲ.

ಗ್ರಾಮೀಣ ಭಾಗದಲ್ಲಿ ವ್ಯವಸ್ಥೆಗೆ ಸೂಚನೆ

ಬೆಂಗಳೂರು: ವೈದ್ಯಕೀಯ ವ್ಯವಸ್ಥೆ ಇಲ್ಲದ ಗ್ರಾಮೀಣ ಭಾಗದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಗೆ ಪತ್ರ ಬರೆದು ಸೂಚಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಬೇಕು. ವೃದ್ಧಾಶ್ರಮ, ಅಪಾರ್ಟ್‌ಮೆಂಟ್ ಸಮುಚ್ಛಯ ಸೇರಿದಂತೆ ವಿವಿಧೆಡೆಯಲ್ಲಿ ವಾಸವಿರುವ ಹಿರಿಯ ನಾಗರಿಕರಿಗೆ ಲಸಿಕೆ ಪಡೆಯಲು ಹತ್ತಿರದಲ್ಲಿ ಕೇಂದ್ರಗಳು ಇರದಿದ್ದಲ್ಲಿ ಪರ್ಯಾಯ ಸೌಕರ್ಯವನ್ನು ಕಲ್ಪಿಸಬೇಕು.‌ ಇಲ್ಲವಾದಲ್ಲಿ ಸಾರಿಗೆ ವ್ಯವಸ್ಥೆಯನ್ನು ಒದಗಿಸಿ, ಕೋವಿಡ್‌ ಲಸಿಕೆ ವಿತರಣೆ ಕೇಂದ್ರಗಳಿಗೆ ಕರೆತರಬೇಕು ಎಂದು ತಿಳಿಸಲಾಗಿದೆ.

ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಕರಣಗಳು:

ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳಲ್ಲೇ ಕೋವಿಡ್‌–19ರ ಗರಿಷ್ಠ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಗುಜರಾತ್‌ ಮತ್ತು ತಮಿಳುನಾಡಿನಲ್ಲಿ ಕೋವಿಡ್‌–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಗುರುವಾರ ದೃಢಪಟ್ಟ ಹೊಸ ಪ್ರಕರಣಗಳಲ್ಲಿ ಶೇಕಡ 79.54ರಷ್ಟು ಈ ಐದು ರಾಜ್ಯಗಳಿಗೆ ಸೇರಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ 25,833, ಕೇರಳದಲ್ಲಿ 1,792 ಮತ್ತು ಪಂಜಾಬ್‌ನಲ್ಲಿ 1,492 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಡಿಸೆಂಬರ್‌ 6ರಂದು 36,011 ಪ್ರಕರಣಗಳು ದೃಢಪಟ್ಟಿದ್ದವು. ದೇಶದಲ್ಲಿ ಗುರುವಾರ 172 ಮಂದಿ ಸಾವಿಗೀಡಾಗಿದ್ದಾರೆ. ಇವರಲ್ಲಿ ಮಹಾರಾಷ್ಟ್ರದ 84, ಪಂಜಾಬ್‌ನ 35 ಮತ್ತು ಕೇರಳದ 13 ಮಂದಿ ಸೇರಿದ್ದಾರೆ. ಕಳೆದ ಎಂಟು ದಿನಗಳಿಂದ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.52 ಲಕ್ಷ ದಾಟಿದೆ. ಗುಣಮುಖರಾಗುವವರ ಪ್ರಮಾಣ ಶೇಕಡ 96.41ರಷ್ಟಿದೆ. ಒಂದು ತಿಂಗಳಿಂದ ಕೇರಳದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್‌, ಮಧ್ಯಪ್ರದೇಶ, ದೆಹಲಿ, ಗುಜರಾತ್‌, ಕರ್ನಾಟಕ ಮತ್ತು ಹರಿಯಾಣದಲ್ಲಿ ಹೆಚ್ಚುತ್ತಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌–19ನಿಂದ ಗುರುವಾರ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

23 ಕೋಟಿ ಮಂದಿಗೆ ಪರೀಕ್ಷೆ: ದೇಶದಲ್ಲಿ ಇದುವರೆಗೆ 23 ಕೋಟಿಗೂ ಹೆಚ್ಚು ಮಂದಿಯ ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT