ಶುಕ್ರವಾರ, ಜೂನ್ 25, 2021
21 °C

‘ತೌಕ್ತೆ’ ಚಂಡಮಾರುತ: 53 ತಂಡಗಳನ್ನು ಸಜ್ಜುಗೊಳಿಸಿರುವ ಎನ್‌ಡಿಆರ್‌ಎಫ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ‘ತೌಕ್ತೆ’ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 53 ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಎಸ್.ಎನ್. ಪ್ರಧಾನ್ ಟ್ವೀಟ್‌ ಮಾಡಿದ್ದಾರೆ.

ಈ 53 ತಂಡಗಳ ಪೈಕಿ 24 ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿದ ತಂಡಗಳು ಸಜ್ಜಾಗಿದ್ದು, ಅಗತ್ಯ ಬಂದಾಗ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿ ಎನ್‌ಡಿಆರ್‌ಎಫ್‌ ತಂಡವು 40 ಸಿಬ್ಬಂದಿಯನ್ನು ಹೊಂದಿರುತ್ತದೆ. ಅವರ ಬಳಿ ಮರ, ಕಂಬ ಕತ್ತರಿಸುವ ಸಾಧನಗಳು ಇರುತ್ತವೆ. ದೋಣಿ, ಮೂಲ ವೈದ್ಯಕೀಯ ಸಾಮಗ್ರಿ ಸೇರಿದಂತೆ ಇತರ ಪರಿಹಾರ ಸಾಧನಗಳು ಈ ತಂಡಗಳಲ್ಲಿ ಇರುತ್ತವೆ.

ಅರಬ್ಬಿ ಸಮುದ್ರದಲ್ಲಿ ಲಕ್ಷದೀಪದ ಸಮೀಪ ಒತ್ತಡ ಸೃಷ್ಟಿಯಾಗಿದ್ದು, ದೇಶದ ಕರಾವಳಿ ತೀರದ ರಾಜ್ಯಗಳು ಎಚ್ಚರದಿಂದ ಇರಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಸೂಚಿಸಿದೆ.

ಶನಿವಾರ ಬೆಳಿಗ್ಗೆಯಷ್ಟರಲ್ಲಿ ಅಲ್ಲಿ ವಾಯುಭಾರ ಕುಸಿತವಾಗಿ ನಂತರದ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಇದು ಕ್ರಮೇಣ ತೀವ್ರಗೊಂಡು ಉತ್ತರ–ವಾಯವ್ಯ ಗುಜರಾತ್‌ ಮತ್ತು ನೆರೆಯ ಪಾಕಿಸ್ತಾನ ತೀರದತ್ತ ಸಾಗಲಿದೆ. ಇದೇ 18ರ ಸಂಜೆ ವೇಳೆಗೆ ಚಂಡಮಾರುತವು ಗುಜರಾತ್‌ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

ಈ ಚಂಡಮಾರುತಕ್ಕೆ ‘ತೌಕ್ತೆ’ ಎಂದು ಹೆಸರಿಸಲಾಗಿದೆ. ಇದು ಮ್ಯಾನ್ಮಾರ್‌ ಭಾಷೆಯ ಪದವಾಗಿದ್ದು, ‘ಹಲ್ಲಿ’ ಎಂದರ್ಥ. ಇದು ಭಾರತೀಯ ಕರಾವಳಿಯುದ್ದಕ್ಕೂ ಪ್ರವೇಶಿಸುತ್ತಿರುವ ಈ ವರ್ಷದ ಮೊದಲ ಚಂಡಮಾರುತವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು