ಶುಕ್ರವಾರ, ಜುಲೈ 30, 2021
24 °C
ಮುಖ್ಯಮಂತ್ರಿಗಳ ಜತೆ ಸಭೆ

'ಯಸ್' ಹಾನಿಯ ವೈಮಾನಿಕ ಸಮೀಕ್ಷೆ; ₹ 1,000 ಕೋಟಿ ತುರ್ತು ನೆರವು ಘೋಷಿಸಿದ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಯಸ್‌’ ಚಂಡಮಾರುತದಿಂದ ಹಾನಿ ಅನುಭವಿಸಿರುವ ರಾಜ್ಯಗಳಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ₹1000 ಕೋಟಿ ತುರ್ತು ಪರಿಹಾರ ಘೋಷಿಸಿದ್ದಾರೆ. ಇದರಲ್ಲಿ ₹500 ಕೋಟಿ ಒಡಿಶಾಗೆ ಹಾಗೂ ಉಳಿದ ₹500 ಕೋಟಿಯನ್ನು ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ ರಾಜ್ಯಗಳಿಗೆ ಈ ಕೂಡಲೇ ಬಿಡುಗಡೆ ಮಾಡಲಾಗುವುದು’ ಎಂದು ಪ್ರಧಾನಮಂತ್ರಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯಸ್ ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆಸಿದರು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಬಳಿಕ, ಸಂಜೆ ಮೋದಿ ಅವರು ಈ ಪರಿಹಾರ ಘೋಷಿಸಿದ್ದಾರೆ.

ಚಂಡಮಾರುತದಿಂದಾಗಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹2ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ ₹50,000 ಪರಿಹಾರವನ್ನೂ ಮೋದಿ ಅವರು ಘೋಷಿಸಿದ್ದಾರೆ.

‘ಚಂಡಮಾರುತದಿಂದ ಆಗಿರುವ ಹಾನಿಯ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಅಂತರ್‌ ಸಚಿವಾಲಯದ ತಂಡವನ್ನು ಕಳುಹಿಸುವುದು. ಈ ತಂಡ ನೀಡುವ ವರದಿಯ ಆಧಾರದಲ್ಲಿ ಮುಂದಿನ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: 

ಶಾಶ್ವತ ಪರಿಹಾರಕ್ಕೆ ಮನವಿ
(ಭುವನೇಶ್ವರ ವರದಿ): ಶುಕ್ರವಾರ ಬೆಳಿಗ್ಗೆ ಒಡಿಶಾಗೆ ಬಂದ ಪ್ರಧಾನಿ ಮೋದಿ ಅವರು, ರಾಜ್ಯಪಾಲ ಗಣೇಶಿಲಾಲ್‌, ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಜತೆ ಸಭೆ ನಡೆಸಿದರು. ಕೇಂದ್ರದ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಪ್ರತಾಪ್‌ ಸಾರಂಗಿ ಅವರೂ ಇದ್ದರು.

‘ಒಡಿಶಾ ಸರ್ಕಾರವು ಪರಿಹಾರದ ರೂಪದಲ್ಲಿ ತಕ್ಷಣಕ್ಕೆ ಆರ್ಥಿಕ ಸಹಾಯಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಿಲ್ಲ. ಬದಲಿಗೆ ಪದೇಪದೇ ಎದುರಾಗುತ್ತಿರುವ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೆರವಾಗುವಂತೆ ಮನವಿ ಮಾಡಿದೆ’ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೇನ ತಿಳಿಸಿದ್ದಾರೆ.

‘ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲಂಥ ವಿದ್ಯುತ್‌ ವಿತರಣಾ ವ್ಯವಸ್ಥೆ ಹಾಗೂ ಕರಾವಳಿ ಪ್ರದೇಶವನ್ನು ಪ್ರವಾಹಗಳಿಂದ ಸಂರಕ್ಷಿಸಲು ಶಾಶ್ವತವಾದ ವ್ಯವಸ್ಥೆ ರೂಪಿಸಲು ನೆರವಾಗುವಂತೆ ಮುಖ್ಯಮಂತ್ರಿ ಪಟ್ನಾಯಕ್‌ ಅವರು ಮನವಿ ಮಾಡಿದರು. ಸದ್ಯಕ್ಕೆ ನಾವು ಕೇಂದ್ರದ ನೆರವಿಗೆ ಮನವಿ ಸಲ್ಲಿಸಿಲ್ಲ. ತನ್ನ ಆರ್ಥಿಕ ಮೂಲಗಳಿಂದಲೇ ಸದ್ಯದ ಸ್ಥಿತಿಯನ್ನು ನಿರ್ವಹಿಸಲಾಗುವುದು. ಚಂಡಮಾರುತದಿಂದ ಆಗಿರುವ ಹಾನಿಯ ಬಗ್ಗೆ ಒಂದು ವಾರದೊಳಗೆ ಅಂದಾಜು ತಯಾರಿಸಿ, ಆನಂತರ ಕೇಂದ್ರದಿಂದ ನೆರವಿಗಾಗಿ ಮನವಿ ಸಲ್ಲಿಸಲಾಗುವುದು’ ಎಂದು ಜೇನ ತಿಳಿಸಿದರು.

ಇದನ್ನೂ ಓದಿ: 

₹ 20 ಸಾವಿರ ಕೋಟಿಗೆ ಮಮತಾ ಬೇಡಿಕೆ
ಮಧ್ಯಾಹ್ನ ಮಶ್ಚಿಮ ಬಂಗಾಳದಲ್ಲಿ ಸಮೀಕ್ಷೆ ನಡೆಸಲು ಬಂದಿದ್ದ ಮೋದಿ ಅವರನ್ನು ಮುಖ್ಯಮಂತ್ರಿ ಮಮತಾ ಅವರು ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂದದಲ್ಲಿ ಭೇಟಿಮಾಡಿದರು. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಈ ಇಬ್ಬರು ನಾಯಕರು ನಡೆಸಿದ ಮೊದಲ ಭೇಟಿ ಇದಾಗಿದೆ.

ಮಮತಾ ಅವರು ಯಸ್‌ ಚಂಡಮಾರುತದಿಂದ ಆಗಿರುವ ಹಾನಿಯ ಪ್ರಾಥಮಿಕ ವರದಿಯನ್ನು ಪ್ರಧಾನಿಗೆ ಸಲ್ಲಿಸಿ, ₹ 20,000 ಕೋಟಿ ನೆರವಿಗೆ ಮನವಿ ಮಾಡಿದ್ದಾರೆ.

‘ದಿಘ ಹಾಗೂ ಸುಂದರ್‌ಬನ್‌ ಜಿಲ್ಲೆಗಳ ಮರು ಅಭಿವೃದ್ಧಿಗೆ ತಲಾ ₹ 1,000 ಕೋಟಿ ನೆರವಿಗೆ ನಾವು ಮನವಿ ಸಲ್ಲಿಸಿದ್ದೇವೆ. ನಮಗೆ ಏನೂ ಲಭಿಸದಿರುವ ಸಾಧ್ಯತೆ ಇದೆ’ ಎಂದು ಮಮತಾ ಅವರು ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

‘ಇಬ್ಬರು ನಾಯಕರ ಮಧ್ಯದ ಸಭೆಯು ಕೇವಲ 15 ನಿಮಿಷಗಳಲ್ಲಿ ಸಭೆಯು ಮುಕ್ತಾಯಗೊಂಡಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು