ಸೋಮವಾರ, ಅಕ್ಟೋಬರ್ 3, 2022
24 °C

ನೀರಿನ ಮಡಕೆ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ದಲಿತ ಬಾಲಕ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಜೋಧಪುರ (ರಾಜಸ್ಥಾನ): ಕುಡಿಯುವ ನೀರಿನ ಮಡಕೆ ಮುಟ್ಟಿದ ಎನ್ನುವ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕನನ್ನು ಹೊಡೆದಿದ್ದರು. ಈ ಬಾಲಕ ಶನಿವಾರ ಮೃತಪಟ್ಟಿದ್ದಾನೆ.

‘ರಾಜಸ್ಥಾನದ ಜಾಲೋರ್‌ ಜಿಲ್ಲೆಯ ಸುರಾನಾ ಎಂಬ ಹಳ್ಳಿಯೊಂದರ ಖಾಸಗಿ ಶಾಲೆಯಲ್ಲಿ ಬಾಲಕ ಇಂದ್ರ ಮೇಘವಾಲ್‌ ಓದುತ್ತಿದ್ದ. ಬಾಲಕನಿಗೆ ಹೊಡೆದ ಶಿಕ್ಷಕ ಚಾಯಿಲ್‌ ಸಿಂಗ್‌ನನ್ನು (40) ಬಂಧಿಸಲಾಗಿದೆ. ಕೊಲೆಗೆ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷಕನ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಾಲೋರ್‌ ಹರ್ಷವರ್ಧನ್‌ ಅಗರ್ವಾಲ್‌ ತಿಳಿಸಿದರು.

ಪ್ರಜ್ಞೆ ತಪ್ಪಿತ್ತು: ‘ಜುಲೈ 20ರಂದು ಘಟನೆ ನಡೆದಿತ್ತು. ಮಗನ ಮುಖ ಮತ್ತು ಕಿವಿಗೆ ಗಾಯಗಳಾಗಿದ್ದವು; ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿದ್ದ. ನಂತರ ಮಗನನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ಉದಯಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರು’ ಎಂದು ಬಾಲಕನ ತಂದೆ ದೇವರಾಮ್‌ ಮೇಘವಾಲ್‌ ವಿವರಿಸಿದರು.

‘ಉ‌‌ದಯಪುರ ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ಇರಿಸಿಕೊಳ್ಳಲಾಯಿತು. ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣ ಕಾಣಲಿಲ್ಲ. ಆದ್ದರಿಂದ ಮಗನನ್ನು ಗುಜರಾತ್‌ನ ಅಹಮದಾಬಾದ್‌ ಆಸ್ಪತ್ರೆಗೆ ಸೇರಿಸಿದೆವು. ಅಲ್ಲಿಯೂ ಯಾವುದೇ ಚೇತರಿಕೆ ಆಗಲಿಲ್ಲ. ಕೊನೆಗೂ ಶನಿವಾರ ತೀರಿಹೋದ’ ಎಂದು ಅವರು ಬೇಸರಿಸಿದರು.

₹5 ಲಕ್ಷ ಪರಿಹಾರ ಘೋಷಣೆ: ಪ್ರಕರಣ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರವನ್ನು ಶನಿವಾರ ಘೋಷಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುವುದು. ಆದಷ್ಟು ಬೇಗ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆಯು ಪ್ರಕರಣದ ಕುರಿತು ತನಿಖೆ ನಡೆಸುವಂತೆ ಇಬ್ಬರು ಅಧಿಕಾರಿಗಳಿಗೆ ಸೂಚನೆ ನೀಡಿದೆ. ವರದಿಯನ್ನು ತಾಲ್ಲೂಕು ಶಿಕ್ಷಣಾಧಿಕಾರಿಗೆ ನೀಡುವಂತೆ ಹೇಳಿದೆ.

ಬಿಜೆಪಿ ಆಕ್ರೋಶ: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಹೊತ್ತಿನಲ್ಲಿ ನಡೆದ ದಲಿತ ಬಾಲಕನ ಸಾವು, ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಚಿಂತಿಸುವಂತೆ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ನಿಲ್ಲದ ದಲಿತರ ಮೇಲಿನ ದೌರ್ಜನ್ಯ: ಬಿಜೆಪಿ
ಜೈಪುರ:
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಹೊತ್ತಿನಲ್ಲಿ ನಡೆದ ದಲಿತ ಬಾಲಕನ ಸಾವು, ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಚಿಂತಿಸುವಂತೆ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಮಾತನಾಡಿ, ‘ದಲಿತರ ಮೇಲಿನ ದೌರ್ಜನ್ಯದ ‍ಪ್ರಕರಣಗಳು ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷದಿಂದ ಒಂದರಮೇಲೊಂದು ನಡೆಯುತ್ತಲೇ ಇವೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಶಕ್ತಿಯುತವಾಗಿಲ್ಲ ಎಂದಾದರೆ ಮಾತ್ರ ಇಂಥ ಘಟನೆಗಳು ನಡೆಯುತ್ತವೆ. ಆರೋಪಿಗೆ ತಕ್ಷಣದಲ್ಲಿ ಶಿಕ್ಷೆಯಾಗಲಿ’ ಎಂದು ಅವರು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

‘ಖಾಸಗಿ ಶಾಲೆಯ ಮಾಲೀಕನ ವಿರುದ್ಧ ಕ್ರಮಕೈಗೊಳ್ಳಬೇಕು. ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕು’ ಎಂದು ಬಿಜೆಪಿ ವಕ್ತಾರ ಮತ್ತು ಶಾಸಕ ರಾಮ್‌ಲಾಲ್‌ ಶರ್ಮಾ ಒತ್ತಾಯಿಸಿದ್ದಾರೆ.

‘ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ’
ಲಖನೌ:
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ‘ರಾಜಸ್ಥಾನದಲ್ಲಿ ಇಂಥ ಜಾತೀಯತೆಯ ಘಟನೆಗಳು ಪ್ರತಿದಿನ ಎನ್ನುವಂತೆ ನಡೆಯುತ್ತಿವೆ. ದಲಿತರ ಘನತೆ ಮತ್ತು ಜೀವವನ್ನು ಕಾಪಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸೋತಿದೆ. ಜತೆಗೆ ದಲಿತರ, ಆದಿವಾಸಿಗಳ ರಕ್ಷಣೆಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ’ ಎಂದು ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶ: ಶಿಕ್ಷಕರ ಹೂಜಿಯಿಂದ ನೀರು ಕುಡಿದ ದಲಿತ ವಿದ್ಯಾರ್ಥಿನಿ ಮೇಲೆ ಹಲ್ಲೆ

ಮೇಲ್ಜಾತಿಯವರು ತಯಾರಿಸಿದ ಬಿಸಿಯೂಟ ತಿನ್ನದೆ ದಲಿತ ವಿದ್ಯಾರ್ಥಿಗಳಿಂದ ಪ್ರತಿರೋಧ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು