ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಎಳೆದೊಯ್ದ ಚಾಲಕ

Last Updated 19 ಜನವರಿ 2023, 21:25 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರಿಗೆ ಯಾವ ರೀತಿಯ ಸುರಕ್ಷತೆ ಇದೆ ಎಂಬುದನ್ನು ಖುದ್ದಾಗಿ ಪರೀಕ್ಷಿಸಲು ಮುಂದಾದ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ ಅವರನ್ನೇ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನೊಬ್ಬ 15 ಮೀಟರ್‌ನಷ್ಟು ದೂರಕ್ಕೆ ಎಳೆದೊಯ್ದ ಘಟನೆ ಗುರುವಾರ ನಸುಕಿನ 3 ಗಂಟೆ ಸುಮಾರಿಗೆ ‘ಏಮ್ಸ್’ ಬಳಿ ನಡೆದಿದೆ.

ಈ ಬಗ್ಗೆ ಸ್ವತಃ ಸ್ವಾತಿ ಅವರು ಗುರುವಾರ ಹೇಳಿಕೆ ನೀಡಿದ್ದು, ‘ದೆಹಲಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷರೇ ಸುರಕ್ಷಿತರಲ್ಲ ಎಂದರೆ, ಇತರ ಮಹಿಳೆಯರಿಗೆ ದೆಹಲಿ ಎಷ್ಟು ಅಸುರಕ್ಷಿತ ಎಂಬುದನ್ನು ಯಾರಾದರೂ ಊಹಿಸಬಹುದು’ ಎಂದು ದೂರಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ದೆಹಲಿಯ ಸಂಗಮ್‌ ವಿಹಾರ್‌ನ ನಿವಾಸಿ ಹರೀಶ್‌ ಚಂದ್ರ (47) ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

‘ಗಸ್ತಿನಲ್ಲಿದ್ದ ಪೊಲೀಸ್‌ ವಾಹನಕ್ಕೆ ಮಾಲೀವಾಲ್‌ ಅವರು ನಡೆದ ಘಟನೆಯನ್ನು ವಿವರಿಸಿದರು. ಬಳಿಕ ಆ ಕಾರಿನ ಜಾಡು ಹಿಡಿದು, ಆರೋಪಿಯನ್ನು ಬಂಧಿಸಲಾಯಿತು’ ಎಂದು ಡಿಸಿಪಿ (ದಕ್ಷಿಣ) ಚಂದನ್‌ ಚೌದರಿ ತಿಳಿಸಿದರು.

ಘಟನೆಯ ವಿವರ: ‘ಪರಿಶೀಲನೆ ನಡೆಸುತ್ತಿದ್ದ ವೇಳೆ ಅಮಲಿನಲ್ಲಿದ್ದ ಕಾರಿನ ಚಾಲಕನೊಬ್ಬ ನನ್ನನ್ನು ದುರುಗುಟ್ಟಿ ನೋಡಿದ. ಕೂಡಲೇ ಅತನನ್ನು ಕಾರಿನ ಕಿಟಕಿಯೊಳಗೆ ಕೈ ಹಾಕಿ ಹಿಡಿದೆ. ಆದರೆ ಆತ ಕಾರಿನ ಕಿಟಕಿಯ ಗಾಜನ್ನು ಏರಿಸಿ, ನನ್ನ ಕೈ ಸಿಲುಕುವಂತೆ ಮಾಡಿ, ಕಾರನ್ನು ಚಲಾಯಿಸಿದ. ಈ ಮೂಲಕ ನನ್ನನ್ನು ಎಳೆದೊಯ್ದ. ದೇವರ ಕೃಪೆಯಿಂದ ನಾನು ಬದುಕುಳಿದಿದ್ದೇನೆ’ ಎಂದು ಸ್ವಾತಿ ಮಾಲೀವಾಲ್‌ ಟ್ವೀಟ್‌ ಮಾಡಿದ್ದಾರೆ.

ದೆಹಲಿಯಲ್ಲಿ ಜನವರಿ 1ರಂದು ಕಾರಿನಡಿಯಲ್ಲಿ ಸಿಲುಕಿದ್ದ ಅಂಜಲಿ ಸಿಂಗ್ ಎಂಬ ಯುವತಿಯನ್ನು ಸುಲ್ತಾನ್‌ಪುರಿಯಿಂದ ಕಂಝಾವಾಲಾವರೆಗೆ ಸುಮಾರು 12 ಕಿ.ಮೀ ಎಳೆದೊಯ್ದು ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹಿಳಾ ಸುರಕ್ಷತೆಯ ಪರಿಸ್ಥಿತಿಗಳನ್ನು ಸ್ವಾತಿ ಮಾಲೀವಾಲ್‌ ಕೆಲ ದಿನಗಳಿಂದ ಪರೀಶಿಲಿಸುತ್ತಿದ್ದಾರೆ.

ಗುರುವಾರ ನಸುಕಿನ ಘಟನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಈ ಕುರಿತು ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೆ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಡಿಸಿಡಬ್ಲ್ಯು ಹೇಳಿಕೆ: ‘ಏಮ್ಸ್‌ ಎದುರಿನ ವರ್ತುಲ ರಸ್ತೆಯ ಬಸ್‌ ನಿಲ್ದಾಣದಲ್ಲಿ ಮಾಲೀವಾಲ್‌ ಅವರು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾರಿನ ಚಾಲಕ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಕೇಳಿದ್ದನು. ಅದನ್ನು ಮಾಲೀವಾಲ್‌ ನಿರಾಕರಿಸಿದಾಗ, ಕೆಲಕಾಲ ದುರುಗುಟ್ಟಿ ನೋಡಿ ಅಲ್ಲಿಂದ ತೆರಳಿದ್ದ. ಕೆಲವೇ ನಿಮಿಷಗಳಲ್ಲಿ ಅದೇ ಜಾಗಕ್ಕೆ ಮತ್ತೆ ಬಂದ ಆತ, ಕಾರಿನಲ್ಲಿ ಕೂರುವಂತೆ ಪುನಃ ಕೇಳಿದ. ಆಗಲೂ ಮಾಲೀವಾಲ್‌ ನಿರಾಕರಿಸಿದಾಗ, ಆತ ಅಶ್ಲೀಲ ಸನ್ನೆಗಳನ್ನು ತೋರಿ ಅಸಭ್ಯದಿಂದ ವರ್ತಿಸಿದ’ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ಆತನ ವರ್ತನೆಯನ್ನು ಮಾಲೀವಾಲ್‌ ಖಂಡಿಸಿದಾಗ, ಆತ ಮತ್ತೆ ಅಶ್ಲೀಲ ಸನ್ನೆಗಳೊಂದಿಗೆ ಅಸಭ್ಯತೆ ತೋರಿದನು. ಈ ವೇಳೆ ಸ್ವಾತಿ ಅವರು ಚಾಲಕನನ್ನು ಹಿಡಿದಾಗ, ಆತ ಕಾರಿನ ಕಿಟಿಕಿಯ ಗಾಜನ್ನು ಮೇಲಕ್ಕೆತ್ತಿ ಅವರ ಕೈ ಸಿಲುಕುವಂತೆ ಮಾಡಿ, ಕಾರು ಚಲಾಯಿಸಿಕೊಂಡು, ಅವರನ್ನು ಎಳೆದೊಯ್ದನು. ಕೆಲ ಮೀಟರ್‌ಗಳಷ್ಟು ದೂರ ಹೋಗುತ್ತಿದ್ದಂತೆ ಮಾಲೀವಾಲ್‌ ಅವರು ಹೇಗೋ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಪ್ರಕಟಣೆ ತಿಳಿಸಿದೆ.

ಡಿಸಿಡಬ್ಲ್ಯು ಹೇಳಿಕೆ
‘ಏಮ್ಸ್‌ ಎದುರಿನ ವರ್ತುಲ ರಸ್ತೆಯ ಬಸ್‌ ನಿಲ್ದಾಣದಲ್ಲಿ ಮಾಲೀವಾಲ್‌ ಅವರು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾರಿನ ಚಾಲಕ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಕೇಳಿದ್ದನು. ಅದನ್ನು ಮಾಲೀವಾಲ್‌ ನಿರಾಕರಿಸಿದಾಗ, ಕೆಲಕಾಲ ದುರುಗುಟ್ಟಿ ನೋಡಿ ಅಲ್ಲಿಂದ ತೆರಳಿದ್ದ. ಕೆಲವೇ ನಿಮಿಷಗಳಲ್ಲಿ ಅದೇ ಜಾಗಕ್ಕೆ ಮತ್ತೆ ಬಂದ ಆತ, ಕಾರಿನಲ್ಲಿ ಕೂರುವಂತೆ ಪುನಃ ಕೇಳಿದ. ಆಗಲೂ ಮಾಲೀವಾಲ್‌ ನಿರಾಕರಿಸಿದಾಗ, ಆತ ಅಶ್ಲೀಲ ಸನ್ನೆಗಳನ್ನು ತೋರಿ ಅಸಭ್ಯದಿಂದ ವರ್ತಿಸಿದ’ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ಆತನ ವರ್ತನೆಯನ್ನು ಮಾಲೀವಾಲ್‌ ಖಂಡಿಸಿದಾಗ, ಆತ ಮತ್ತೆ ಅಶ್ಲೀಲ ಸನ್ನೆಗಳೊಂದಿಗೆ ಅಸಭ್ಯತೆ ತೋರಿದನು. ಈ ವೇಳೆ ಸ್ವಾತಿ ಅವರು ಚಾಲಕನನ್ನು ಹಿಡಿದಾಗ, ಆತ ಕಾರಿನ ಕಿಟಿಕಿಯ ಗಾಜನ್ನು ಮೇಲಕ್ಕೆತ್ತಿ ಅವರ ಕೈ ಸಿಲುಕುವಂತೆ ಮಾಡಿ, ಕಾರು ಚಲಾಯಿಸಿಕೊಂಡು, ಅವರನ್ನು ಎಳೆದೊಯ್ದನು. ಕೆಲ ಮೀಟರ್‌ಗಳಷ್ಟು ದೂರ ಹೋಗುತ್ತಿದ್ದಂತೆ ಮಾಲೀವಾಲ್‌ ಅವರು ಹೇಗೋ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT