ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಾಹಣಿಗೆ ದಿನ ನಿಗದಿ: 4 ರಾಜ್ಯಗಳು, ಪುದುಚೇರಿ ವಿಧಾನ ಸಭೆಗೆ ಚುನಾವಣೆ ಘೋಷಣೆ

Last Updated 26 ಫೆಬ್ರುವರಿ 2021, 20:45 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನ ಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು ಅಂದರೆ, ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೊದಲ ಹಂತದ ಮತದಾನವು ಮಾರ್ಚ್‌ 27 ರಂದು ನಡೆಯಲಿದೆ. ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮತ್ತು ಕೇರಳದಲ್ಲಿ ಏಪ್ರಿಲ್‌ 6ರಂದು ಒಂದೇ ಹಂತದಲ್ಲಿ ಮತದಾನ ನಿಗದಿಯಾಗಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆ ನಡೆಯಲಿರುವ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ, ಇತರ ಪಕ್ಷಗಳಿಗೆ ಭಾರಿ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ. ಅಸ್ಸಾಂನಲ್ಲಿ ಈಗ ಬಿಜೆಪಿಯೇ ಅಧಿಕಾರದಲ್ಲಿದ್ದು ಅಧಿಕಾರ ಉಳಿಸಿಕೊಳ್ಳುವ ಸವಾಲು ಆ ಪಕ್ಷದ ಮುಂದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಇದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ.

ಕೇರಳದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರ ಇದೆ. ಎಐಎಡಿಎಂಕೆ ಜತೆಗೆ ಬಿಜೆಪಿಗೆ ಮೈತ್ರಿ ಇದೆ. ಪುದುಚೇರಿಯಲ್ಲಿ ಕೆಲವೇ ದಿನಗಳ ಹಿಂದಿನ ವರೆಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇತ್ತು. ಆದರೆ, ಕಾಂಗ್ರೆಸ್‌ ಮತ್ತು ಡಿಎಂಕೆಯ ಕೆಲವು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಅಲ್ಲಿನ ಸರ್ಕಾರ ಉರುಳಿದೆ. ಈಗ ಅಲ್ಲಿ ರಾಷ್ಟ್ರಪತಿ ಆಡಳಿತವಿದೆ. ಈ ಮೂರೂ ಕಡೆಗಳಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಆದರೆ, ಅಲ್ಲಿ ನೆಲೆಯೂರಲು ದೊಡ್ಡ ಮಟ್ಟದ ಪ್ರಯತ್ನ ಮತ್ತು ಕಾರ್ಯತಂತ್ರಗಳನ್ನು ಬಿಜೆಪಿ ನಡೆಸುತ್ತಿದೆ.

ಅಧಿಕಾರಕ್ಕೆ ಏರಲು ಬಿಜೆಪಿ ನಡೆಸುತ್ತಿರುವ ಭಾರಿ ಪ್ರಯತ್ನಗಳಿಂದಾಗಿ ಪಶ್ಚಿಮ ಬಂಗಾಳ ಚುನಾವಣೆಯ ಮೇಲೆ ಇಡೀ ದೇಶದ ಗಮನ ಇದೆ. ಹಾಗಾಗಿಯೇ, ಈ ರಾಜ್ಯಕ್ಕೆ ಇಬ್ಬರು ವಿಶೇಷ ವೀಕ್ಷಕರನ್ನು ಚುನಾವಣಾ ಆಯೋಗವು ನೇಮಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ತೀವ್ರವಾಗಿದೆ. ಹಾಗಾಗಿಯೇ ಇಬ್ಬರು ವಿಶೇಷ ವೀಕ್ಷಕರನ್ನು ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ ಹೇಳಿದ್ದಾರೆ.

ಅರೋರ ಅವರು ಈ ಚುನಾವಣಾ ಪ್ರಕ್ರಿಯೆಯ ಮಧ್ಯದಲ್ಲಿಯೇ ಅಂದರೆ ಏಪ್ರಿಲ್‌ 13ರಂದುನಿವೃತ್ತರಾಗಲಿದ್ದಾರೆ.

ಎಂಟು ಹಂತ ಏಕೆ: ಮಮತಾ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.‘ಯಾರ ಹಿತಾಸಕ್ತಿಗಾಗಿ ಎಂಟು ಹಂತಗಳಲ್ಲಿ ಮತದಾನ? ನಿಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಒಂದೇ ಜಿಲ್ಲೆಯಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಸಲು ಕಾರಣವೇನು ಎಂಬುದನ್ನು ಹೇಳಿ. ಅಸ್ಸಾಂ (ಇಲ್ಲಿ ಮೂರು ಹಂತಗಳಿವೆ), ತಮಿಳುನಾಡು, ಕೇರಳದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಬಹುದಾದರೆ ಪಶ್ಚಿಮ ಬಂಗಾಳದಲ್ಲಿ 23 ದಿನಗಳ ಆಟ ಏಕೆ’ ಎಂದು ಮಮತಾ ಪ್ರಶ್ನಿಸಿದ್ದಾರೆ.ಪ್ರಧಾನಿ ಮತ್ತು ಗೃಹ ಸಚಿವರು ಪಶ್ಚಿಮ ಬಂಗಾಳದಲ್ಲಿ ತಮ್ಮ ಅಧಿಕಾರ ದುರುಪಯೋಗ ಮಾಡದಂತೆ ನೋಡಿಕೊಳ್ಳಿ ಎಂದು ಚುನಾವಣಾ ಆಯೋಗವನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT