ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಗೆ ₹7,965 ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ಪರಿಕರ ಖರೀದಿಗೆ ಅಸ್ತು

Last Updated 2 ನವೆಂಬರ್ 2021, 10:35 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 12 ಹಗುರ ಬಹುಪಯೋಗಿ ಹೆಲಿಕಾಪ್ಟರ್ ಒಳಗೊಂಡಂತೆ₹ 7,965 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಸೇನಾ ಪರಿಕರಗಳ ಖರೀದಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಖರೀದಿಗೆ ಸಂಬಂಧಿಸಿದ, ಸಚಿವಾಲಯದ ಸಮಿತಿಯ (ಡಿಎಸಿ) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

12 ಹೆಲಿಕಾಪ್ಟರ್‌ ಅಲ್ಲದೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಿಂದ ಲಿಂಕ್ಸ್‌ ಯು2 ನೌಕಾದಳದ ಗನ್‌ಫೈರ್ ನಿಯಂತ್ರಣ ವ್ಯವಸ್ಥೆ ಖರೀದಿಗೂ ಅನುಮೋದನೆ ನೀಡಲಾಗಿದೆ. ಇದು, ಯುದ್ಧ ಹಡಗುಗಳ ಸಾಮರ್ಥ್ಯ ವೃದ್ಧಿಸಲಿದೆ.

ಸಚಿವಾಲಯದ ಹೇಳಿಕೆ ಪ್ರಕಾರ, ಸಮಿತಿಯು ಡಾರ್ನಿಯರ್‌ ವಿಮಾನವನ್ನು ಮೇಲ್ದರ್ಜೆಗೆ ಏರಿಸುವ ಹೊಣೆಯನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ಗೆ ಒಪ್ಪಿಸುವುದು, ನೌಕಾದಳದ ಸಾಮರ್ಥ್ಯ ವೃದ್ಧಿ, ಕರಾವಳಿ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಪ್ರಸ್ತಾಪಗಳಿಗೂ ಅನುಮೋದನೆ ನೀಡಿತು ಎಂದು ತಿಳಿಸಿದೆ.

ಆತ್ಮನಿರ್ಭರ ಭಾರತ್‌ ಚಿಂತನೆಯ ಭಾಗವಾಗಿ ನೌಕಾಪಡೆಯ ಗನ್‌ಗಳ ಖರೀದಿಗೆ ಜಾಗತಿಕ ಮಟ್ಟದಲ್ಲಿ ಖರೀದಿಸುವುದನ್ನು ಕೈಬಿಡಲಾಗಿದೆ. ಈಗ ಬಿಎಚ್ಇಎಲ್‌ ಈ ಕ್ಷಿಪ್ರ ಚಾಲನೆಯ ಗೌನ್‌ ಮೌಂಟ್‌ಗಳನ್ನು ಅಭಿವೃದ್ಧಿಪಡಿಸಿದೆ. ನಿರ್ದಿಷ್ಟ ಗುರಿಗೆ ಅನುಗುಣವಾಗಿ ಪ್ರಯೋಗಿಸಬಹುದಾದ ಇಂಥ ಗನ್‌ಗಳನ್ನು ನೌಕಾದಳದ ಯುದ್ಧ ಹಡಗುಗಳಿಗೆ ಅಳವಡಿಸಲಾಗುತ್ತದೆ ಎಂದು ಹೇಳಿಕೆಯು ತಿಳಿಸಿದೆ.

ಈ ಎಲ್ಲ ಪ್ರಸ್ತಾಪಗಳು ‘ಮೇಕ್‌ ಇನ್‌ ಇಂಡಿಯಾ’ ಅನ್ವಯ ದೇಶೀಯವಾಗಿಯೇ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಒತ್ತು ನೀಡಲಿವೆ ಎಂದು ಹೇಳಿಕೆ ತಿಳಿಸಿದೆ.

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಸಂದರ್ಭದಲ್ಲಿಯೇ ಸೇನಾ ಪರಿಕರಗಳ ಸಾಮರ್ಥ್ಯ ವೃದ್ಧಿಗೂ ಒತ್ತು ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT