ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಳ್ಳನ್ನೆಲ್ಲ ಒಪ್ಪಿದರೆ ಪಂಜಾಬ್ ಕಾಂಗ್ರೆಸ್‌ನ 25 ಶಾಸಕರು ಎಎಪಿಗೆ: ಕೇಜ್ರಿವಾಲ್

Last Updated 23 ನವೆಂಬರ್ 2021, 10:16 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್‌ನ ಕನಿಷ್ಠ 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಆ ಪಕ್ಷಕ್ಕೆ ಬೇಡವಾದವರನ್ನು ಸೇರಿಸಿಕೊಳ್ಳಲು ಇಷ್ಟವಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವ ಅಮರಿಂದರ್ ಸಿಂಗ್ ಅವರು ಎಎಪಿ ಜೊತೆಗೆ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಕೇಜ್ರಿವಾಲ್ ಹೀಗೆ ಪ್ರತಿಕ್ರಿಯಿಸಿದರು.

ಪಂಜಾಬ್ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಜ್ರಿವಾಲ್, 'ಕಾಂಗ್ರೆಸ್‌ನ ಹಲವು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಆ ಪಕ್ಷಕ್ಕೆ ಬೇಡವಾದವರನ್ನು ನಾವೂ ಬಯಸುವುದಿಲ್ಲ. ಜೊಳ್ಳನ್ನೆಲ್ಲ ಸೇರಿಸಿಕೊಳ್ಳುವುದಾದರೆ, ಇಂದು ಸಂಜೆಯೊಳಗೆ ಕಾಂಗ್ರೆಸ್‌ನ 25 ಶಾಸಕರು ಮತ್ತು ಇಬ್ಬರು ಅಥವಾ ಮೂವರು ಸಂಸದರು ನಮ್ಮ ಪಕ್ಷ ಸೇರುತ್ತಾರೆ ಎಂದು ಭರವಸೆ ನೀಡುತ್ತೇನೆ' ಎಂದಿದ್ದಾರೆ.

ತಾವು ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುದಿಲ್ಲ ಎಂಬುದನ್ನು ಇದೇವೇಳೆ ಸ್ಪಷ್ಟಪಡಿಸಿರುವ ಅವರು,ಎಎಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವವರು ಯಾರು ಎಂಬುದನ್ನು ಬಹಿರಂಗಪಡಿಸಲಿಲ್ಲ.

ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ವಿರುದ್ಧ ಕಿಡಿಕಾರಿರುವ ದೆಹಲಿ ಸಿಎಂ, 'ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಪಂಜಾಬ್ ಸರ್ಕಾರ ಕಣ್ಣೀರು ಹಾಕುತ್ತಿದೆ. ಆದರೆ, ಖಜಾನೆ ಖಾಲಿ ಮಾಡಿದವರು ಯಾರು? ಕಳೆದ 15 ವರ್ಷಗಳಿಂದ ನೀವು ಅಧಿಕಾರದಲ್ಲಿದ್ದೀರಿ. ರಾಜ್ಯದ ಖಜಾನೆ ತುಂಬಿಸುವುದು ಹೇಗೆ ಎಂಬುದು ಕೇಜ್ರಿವಾಲ್‌ಗೆ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಒಂದು ಅವಕಾಶ ಕೊಡಿ'
'ಎಎಪಿಗೆ ಒಂದೇಒಂದು ಅವಕಾಶ ನೀಡಿ. ದೆಹಲಿಯಲ್ಲಿ ಪರಿವರ್ತನೆ ಮಾಡಿದಂತೆ, ಪಂಜಾಬ್‌ನಲ್ಲಿಯೂ ಬದಲಾವಣೆ ತರುತ್ತೇವೆ. ಆಮ್‌ ಆದ್ಮಿ ಪಕ್ಷಕ್ಕೆ ಪ್ರತಿಯೊಬ್ಬರೂ ಮತ ಹಾಕಿ ಎಂದು ಮನವಿ ಮಾಡುತ್ತೇನೆ' ಎಂದು ಜನರನ್ನು ಒತ್ತಾಯಿಸಿದ್ದಾರೆ.

ನವಜೋತ್ ಸಿಂಗ್ ಸಿಧು ಸಾಕಷ್ಟು ಪ್ರಮುಖ ವಿಚಾರಗಳನ್ನು ಎತ್ತಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಅವನ್ನೆಲ್ಲ ನಿಗ್ರಹಿಸುತ್ತಿದೆ ಎಂದೂ ದೂರಿದ್ದಾರೆ. ಮುಂದುವರಿದು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧವೂ ಕಿಡಿಕಾರಿರುವ ಕೇಜ್ರಿವಾಲ್, ಸಿಂಗ್ ಅವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಉಚಿತವಾಗಿ ವಿದ್ಯುತ್ ನೀಡುವುದಾಗಿ, ಭ್ರಷ್ಟಾಚಾರವನ್ನು ತೊಡೆದುಹಾಕುವುದಾಗಿ ಮಾತು ಕೊಟ್ಟಿದ್ದರು. ಆದರೆ, ಅವು ಕಾರ್ಯರೂಪಕ್ಕೆ ಬರಲಿಲ್ಲ. ಸಚಿವರು ಅನುಭವಿಸುತ್ತಿರುವ ಪ್ರತಿಯೊಂದು ಉಚಿತ ಸೌಲಭ್ಯವನ್ನು ರಾಜ್ಯದ ಜನರಿಗೆ ತಲುಪಿಸಲು ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT