ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ

Last Updated 25 ನವೆಂಬರ್ 2022, 11:14 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು(ಸಿಬಿಐ) ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದ್ದು, 7 ಮಂದಿಯನ್ನು ಆರೋಪಿಗಳೆಂದು ಹೆಸರಿಸಿದೆ.

ರೋಸ್ ಅವೆನ್ಯೂ ಕೋರ್ಟ್‌ಗೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ವಿಜಯ್ ನಾಯರ್, ಅಭಿಷೇಕ್ ಬೋನಾಪಲ್ಲಿ, ಸಮೀರ್ ಮಹೇಂದ್ರು, ಅರಣ್ ರಾಮಚಂದ್ರ ಪಿಳ್ಳೈ, ಮೂಥಾ ಗೌತಮ್, ಅಬಕಾರಿ ಇಲಾಖೆಯ ಹಿಂದಿನ ಉಪ ಆಯುಕ್ತ ಕುಲದೀಪ್ ಸಿಂಗ್, ಹಿಂದಿನ ಅಸಿಸ್ಟೆಂಟ್ ಕಮೀಷನರ್ ನರೇಂದ್ರ ಸಿಂಗ್ ಅವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಮುಂಬರುವ ದಿನಗಳಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸಿಸೋಡಿಯಾ ಅವರನ್ನು ಆರೋಪಿ ನಂ1 ಎಂದು ಉಲ್ಲೇಖಿಸಲಾಗಿದೆ. ಐಪಿಸಿ ಸೆಕ್ಷನ್ 120–ಬಿ(ಕ್ರಿಮಿನಲ್ ಸಂಚು) ಮತ್ತು 477 ಎ(ಸುಳ್ಳು ದಾಖಲೆ ಸೃಷ್ಟಿ) ಅಡಿಯಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ಮದ್ಯದ ವ್ಯಾಪಾರಿಗಳಿಗೆ ₹30 ಕೋಟಿಯಷ್ಟು ವಿನಾಯಿತಿ ನೀಡಲಾಗಿತ್ತು ಎಂಬುದು ಸಿಸೋಡಿಯಾ ಮೇಲಿನ ಆರೋಪವಾಗಿದೆ. ಮದ್ಯ ಮಾರಾಟ ಪರವಾನಗಿ ಹೊಂದಿರುವವರಿಗೆ ಅವರ ಇಚ್ಛೆಯಂತೆ ಪರವಾನಗಿಯನ್ನು ನವೀಕರಣ ಮಾಡಲಾಗಿದೆ. ಇದಕ್ಕಾಗಿ ಅಬಕಾರಿ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪವಾಗಿದೆ.

ಟೆಂಡರ್‌ ನಂತರದ ಸನ್ನದುದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು. 2021-22ನೇ ಸಾಲಿನ ದೆಹಲಿಯ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿನ ಆಧಾರದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು.

‘ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಅಬಕಾರಿ ಇಲಾಖೆಯ ಅಂದಿನ ಉಪ ಆಯುಕ್ತ ಆನಂದ್ ತಿವಾರಿ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ ಅಬಕಾರಿ ನೀತಿಗೆ ಸಂಬಂಧಿಸಿದ ಶಿಫಾರಸು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021-22ನೇ ಸಾಲಿನ ಅಬಕಾರಿ ನೀತಿಯನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಟೆಂಡರ್‌ ನಂತರ ಪರವಾನಗಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೂಪಿಸಲಾಗಿತ್ತು’ ಎಂದು ಆರೋಪಿಸಲಾಗಿದೆ.

‘ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ‘ಓನ್ಲಿ ಮಚ್ ಲೌಡರ್‌’ನ ಮಾಜಿ ಸಿಇಒ ವಿಜಯ್ ನಾಯರ್‌, ‘ಪೆರ್ನೋಡ್ ರಿಕಾರ್ಡ್‌’ನ ಮಾಜಿ ಉದ್ಯೋಗಿ ಮನೋಜ್ ರೈ, ‘ಬ್ರಿಂಡ್ಕೊ ಸ್ಪಿರಿಟ್ಸ್’ ಮಾಲೀಕ ಅಮನದೀಪ್ ಧಾಲ್ ಮತ್ತು ‘ಇಂಡೋಸ್ಪಿರಿಟ್ಸ್‌’ನ ಮಾಲೀಕ ಸಮೀರ್ ಮಹೇಂದ್ರು ಅವರು ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು’ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಹಣವನ್ನು ಬೇರೆಡೆ ವರ್ಗಾಯಿಸಲು, ಸರ್ಕಾರಿ ಸೇವೆಯಲ್ಲಿದ್ದ ಕೆಲ ಮಂದಿಗೆ ತಲುಪಿಸಲು ಎಲ್‌–1 ಪರವಾನಗಿದಾರರು ಚಿಲ್ಲರೆ ಮಾರಾಟಗಾರರಿಗೆ ‘ಕ್ರೆಡಿಟ್‌ ನೋಟ್‌’ಗಳನ್ನು ನೀಡುತ್ತಿದ್ದರು. ದಾಖಲೆಗಳನ್ನು ತಿರುಚಲು ಖಾತೆಗಳ ಪುಸ್ತಕಗಳಲ್ಲಿ ತಪ್ಪು ಲೆಕ್ಕ ತೋರಿಸುತ್ತಿದ್ದರು ಎಂದೂ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT