ಸೋಮವಾರ, ಮೇ 23, 2022
30 °C

ಯಮುನಾ ನದಿಗೆ ನೀರು ಸಿಂಪಡಣೆ; ವಿಷಯುಕ್ತ ನೊರೆ ಕರಗಿಸಲು ದೆಹಲಿ ಸರ್ಕಾರದ ಯತ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ವಿಷಪೂರಿತ ನೊರೆ ತೇಲುತ್ತಿದ್ದು, ಜನರು ನದಿಗೆ ಇಳಿಯುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಟ್ಯಾಂಕರ್‌ಗಳ ಮೂಲಕ ನದಿಗೆ ನೀರು ಸಿಂಪಡಿಸಲಾಗುತ್ತಿದೆ, ಬಿದಿರಿನ ತಡೆಗಳನ್ನು ನಿರ್ಮಿಸಲಾಗಿದೆ. ಈ ಕ್ರಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿವೆ.

ನದಿಯಲ್ಲಿನ ವಿಷದ ನೊರೆಯನ್ನು ಕರಗಿಸಲು ಕಲಿಂದಿ ಕುಂಜ್‌ ತಟದಲ್ಲಿ ಸರ್ಕಾರವು 15 ದೋಣಿಗಳನ್ನು ನಿಯೋಜಿಸಿದೆ. ಈ ನಡುವೆ ಜನರು ಛಠ್ ಪೂಜೆಯ ಪ್ರಯುಕ್ತ ಕಲುಷಿತ ನದಿಯಲ್ಲಿ ಇಳಿದು, ಮುಳುಗಿರುವುದು ಕಂಡು ಬಂದಿದೆ. ನದಿಯ ನೀರಿನಲ್ಲಿ ವಿಷಕಾರಕ ಅಂಶಗಳು ಹೆಚ್ಚಾಗಿರುವುದನ್ನು ನೊರೆಯು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಧಿಕೃತ ಕಾಲೊನಿಗಳಿಂದ ಕೊಳಚೆ ನೀರು ನದಿಗೆ ಹರಿಯುತ್ತಿದೆ ಹಾಗೂ ಜಲ ಶುದ್ಧೀಕರಣ ಘಟಕಗಳನ್ನು ಉನ್ನತ ದರ್ಜೆಗೆ ಏರಿಸುವವರೆಗೂ ಈ ಸ್ಥಿತಿ ಮುಂದುವರಿಯಲಿದೆ ಎಂದಿದ್ದಾರೆ.

ಹೆಚ್ಚುತ್ತಿರುವ ನೊರೆಯ ಪ್ರಮಾಣವನ್ನು ಕಡಿಮೆ ಮಾಡಲು ನದಿಗೆ ನೀರು ಸಿಂಪಡಿಸುವ ಕ್ರಮಕೈಗೊಳ್ಳಲಾಗಿದೆ. 'ನೀರಿನ ಹನಿಗಳಿಂದಾಗಿ ನೊರೆಯೊಳಗಿನ ಗಾಳಿಯ ಗುಳ್ಳೆಗಳು ಚದುರುತ್ತವೆ ಹಾಗೂ ನೊರೆಯು ಕಣ್ಮರೆಯಾಗುತ್ತದೆ' ಎಂದು ದೆಹಲಿ ಜಲ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರೊಂದಿಗೆ ನೊರೆಯನ್ನು ಹಿಡಿದಿಡಲು ಬಿದಿರಿನ ಬಲೆಗಳನ್ನು ಅಳವಡಿಸಲಾಗಿದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

ದೆಹಲಿಯಲ್ಲಿರುವ ಬಿಹಾರ, ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ ಮೂಲದ 'ಪೂರ್ವಾಂಚಲರು' ನಾಲ್ಕು ದಿನಗಳ ಛಠ್‌ ಪೂಜೆ ಆಚರಿಸುತ್ತಾರೆ. ಭಕ್ತಾದಿಗಳು ಉಪವಾಸದಲ್ಲಿದ್ದು, ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಆಚರಣೆ ನಡೆಸುತ್ತಾರೆ. ಕೋವಿಡ್‌ ಸಾಂಕ್ರಾಮಿಕದ ಕಾರಣಗಳಿಂದ ಯಮುನಾ ನದಿ ತೀರದಲ್ಲಿ ಛಠ್‌ ಪೂಜೆ ನಡೆಸುವುದನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಧಾಕಾರಿವು ನಿಷೇಧಿಸಿತ್ತು.

 

ಸರ್ಕಾರದ ಕ್ರಮಗಳನ್ನು ಟೀಕಿಸಿರುವ ಛಾಠ್‌ ಪೂಜೆ ಸಮಿತಿಯ ಅಧ್ಯಕ್ಷ ವಿಕಾಸ್ ರಾಯ್‌, 'ಸರ್ಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ದೋಣಿಗಳು, ಬಿದಿರಿನ ತಡೆಗಳು ಹಾಗೂ ನೀರು ಸಿಂಪಡಿಸುವುದರಿಂದ ಉಪಯೋಗವಿಲ್ಲ. ನೀವು ನೊರೆಯನ್ನು ತೆಗೆಯುತ್ತಿದ್ದಂತೆ ಅದು ಮರಳಿ ಬರುತ್ತಿರುತ್ತದೆ. ಇದು ಕಣ್ಣೀರು ಒರೆಸುವ ತಂತ್ರವಷ್ಟೇ...' ಎಂದು ಪ್ರತಿಕ್ರಿಯಿಸಿದ್ದಾರೆ.

 

ನದಿಗೇ ನೀರು ಸಿಂಪಡಿಸುತ್ತಿರುವ ವಿಡಿಯೊ ಕಂಡಿರುವ ನೆಟ್ಟಿಗರು ವ್ಯಂಗ್ಯ ಭರಿತ ಕಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. 'ನದಿಗೇ ನೀರುಣಿಸುವ ಸಮಯ, ಎಂಥ ಬುದ್ಧಿವಂತಿಕೆಯ ನಡೆ! ನೀರು ಸಿಂಪಡಿಸಿ ನೊರೆಯನ್ನು ಶಮನಗೊಳಿಸುವುದರಿಂದ ನದಿ ನೀರಿನ ಹಾನಿಕಾರಕ ಮಟ್ಟ ಹೇಗೆ ಕಡಿಮೆಯಾಗುತ್ತದೆ, ಒಂದಾನೊಂದು ಕಾಲದಲ್ಲಿ ನಾನು ಸಮುದ್ರವನ್ನು ಶುಭ್ರಗೊಳಿಸುತ್ತಿದ್ದೆ,...' ಇಂಥ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು