ಶನಿವಾರ, ಜನವರಿ 28, 2023
19 °C
ದೆಹಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಸಿಆರ್‌ ಪುತ್ರಿ ಹೆಸರು?

ಎಎಪಿ ನಾಯಕನಿಗೆ ₹100 ಕೋಟಿ ಲಂಚ: ನ್ಯಾಯಾಲಯಕ್ಕೆ ಇಡಿ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡ ವಿಜಯ್‌ ನಾಯರ್‌ಗೆ ಕನಿಷ್ಟ ₹100 ಕೋಟಿ ಲಂಚ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯಕ್ಕೆ ಹೇಳಿದೆ. 

‘ದಕ್ಷಿಣದ ಕಂಪನಿಯಿಂದ ಹಣ ಬಂದಿದೆ. ಶರತ್‌ ರೆಡ್ಡಿ, ಕೆ.ಕವಿತಾ, ಮಗುಂಟ ಶ್ರೀನಿವಾಸಲು ರೆಡ್ಡಿ ನಿಯಂತ್ರಣದ ಕಂಪನಿಯಿದು. ಎಎಪಿ ಸಂವಹನ ವಿಭಾಗದ ಮುಖ್ಯಸ್ಥ ವಿಜಯ್‌ ನಾಯರ್‌ಗೆ ಈ ಹಣ ಸಂದಾಯವಾಗಿದೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದಾಗ್ಯೂ ಕವಿತಾ ಯಾರೆಂದು ಗುರುತಿಸಿಲ್ಲ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಹಾಗೂ ಶಾಸಕಿ ಕೆ.ಕವಿತಾ ಪಾಲಿದೆ ಎಂದು ಆಗಸ್ಟ್‌ನಲ್ಲಿ ಬಿಜೆಪಿ ನಾಯಕರಾದ ಪರ್ವೇಶ್‌ ವರ್ಮಾ ಮತ್ತು ಮಂಜಿಂದರ್‌ ಸಿಂಗ್‌ ಸಿರ್ಸಾ ಆರೋಪಿಸಿದ್ದರು. ಇದನ್ನು ತಳ್ಳಿ ಹಾಕಿದ್ದ ಕವಿತಾ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. 

ದೆಹಲಿ ಅಬಕಾರಿ ನೀತಿ(2021–22)ರಾಜ್ಯದ ಬೊಕ್ಕಸದ ವೆಚ್ಚದಲ್ಲಿ ಅಕ್ರಮ ಹಣಕ್ಕಾಗಿ ದೆಹಲಿ ಸರ್ಕಾರದ ಕೆಲವರು ಸೇರಿದಂತೆ ಎಎಪಿ ನಾಯಕರು ರಚಿಸಿರುವ "ಸಾಧನ" ಎಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ನ್ಯಾಯಾಲಯಕ್ಕೆ ಇಡಿ ತಿಳಿಸಿದೆ.

ಆಗಸ್ಟ್‌ನಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಇದನ್ನು ಆಧರಿಸಿ ಇಡಿ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು. ವಿಚಾರಣೆಯಲ್ಲಿ ನಾಯರ್‌ ಅವರನ್ನು ಪ್ರತಿನಿಧಿಸುತ್ತಿರುವ ವಕೀಲರು ಇಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 

ಗುರುಗ್ರಾಮದ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ವಶಕ್ಕೆ ಪಡೆಯುವ ಕುರಿತಾಗಿನ ತನ್ನ ಅರ್ಜಿಯಲ್ಲಿ ದೆಹಲಿ ಅಬಕಾರಿ ನೀತಿಯನ್ನು "ಉದ್ದೇಶಪೂರ್ವಕ ಲೋಪದೋಷಗಳು", "ಕಾನೂನುಬಾಹಿರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಂತರ್ಗತ ಕಾರ್ಯವಿಧಾನ" ದೊಂದಿಗೆ ರೂಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಇಡಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು