ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಲ್ಲಿ ಬಾಯಿ’ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಭಾವಚಿತ್ರ ದುರ್ಬಳಕೆ: ಎಫ್ಐಆರ್

Last Updated 2 ಜನವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಈ ಸಂಬಂಧ ಪತ್ರಕರ್ತೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಭಾನುವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಮುಂಬೈನ ಸೈಬರ್‌ ಕ್ರೈಂ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಬಳಿಕ ಈ ಆ್ಯಪ್‌ ಅನ್ನು ನಿರ್ಬಂಧಿಸಲಾಗಿದೆ.

‘ಬುಲ್ಲಿ ಬಾಯಿ’ ಆ್ಯಪ್‌ ಅನ್ನು ನಿರ್ಬಂಧಿಸಿರುವುದಾಗಿ ಗಿಟ್‌ಹಬ್‌ ವೇದಿಕೆಯು ದೃಢಪಡಿಸಿದೆ. ಈ ಕುರಿತು ಕಂಪ್ಯೂಟರ್‌ ತುರ್ತು ಪ್ರತಿಸ್ಪಂದನಾ ತಂಡ (ಸಿಇಆರ್‌ಟಿ) ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಟ್ವೀಟ್‌ ಮಾಡಿದ್ದಾರೆ.

ಈ ವಿಚಾರವಾಗಿ ದೆಹಲಿ ಮತ್ತು ಮುಂಬೈ ಪೊಲೀಸರ ಜೊತೆ ಕೇಂದ್ರ ಸರ್ಕಾರವು ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ ‘ಸುಲ್ಲಿ ಡೀಲ್ಸ್‌’ ಆ್ಯಪ್‌ನಲ್ಲೂ ಇದೇ ರೀತಿಯಲ್ಲಿ ಮಹಿಳೆಯರ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಲಾಗಿತ್ತು. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಆ್ಯಪ್‌ಗೆ ಅಪ್‌ಲೋಡ್‌ ಮಾಡಲಾಗಿದೆ.

‘ಬುಲ್ಲಿ ಬಾಯಿ’ ಕೂಡ ‘ಸುಲ್ಲಿ ಡೀಲ್ಸ್’ ನಂತೆ ಗಿಟ್‌ಹಬ್‌ ವೇದಿಕೆಯ ಆ್ಯಪ್‌ ಆಗಿದ್ದು, ಇವುಗಳಲ್ಲಿ ಸಾಮ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿ ಪೊಲೀಸರ ಸೈಬರ್‌ ಕ್ರೈಂ ವಿಭಾಗವು ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸಿದ್ದು, ಈ ಆ್ಯಪ್‌ ಬಗ್ಗೆ ಮೊದಲು ಪೋಸ್ಟ್ ಮಾಡಿದ ವ್ಯಕ್ತಿಯ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿದೆ.

ಪ್ರಕರಣದ ಬಗ್ಗೆ ಮುಂಬೈ ಪೊಲೀಸರಿಂದ ದೂರು ಸ್ವೀಕರಿಸಲಾಗಿದೆ. ಕ್ರಮ ಕ್ರೈಗೊಳ್ಳುವ ಪ್ರಕ್ರಿಯೆ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿದೆ ಎಂದು ಗಿಟ್‌ಹಬ್‌ ವೇದಿಕೆಯು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

‘ಬುಲ್ಲಿ ಬಾಯಿ’ ಆ್ಯಪ್‌ ಮೂಲಕ ಮಹಿಳೆಯರನ್ನು ಅವಹೇಳನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶನಿವಾರ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT