ಭಾನುವಾರ, ಮೇ 29, 2022
24 °C

ಕೇರಳ: ಅನಂತಪದ್ಮನಾಭ ಸ್ವಾಮಿ ದೇಗುಲಕ್ಕೆ ಆರ್ಥಿಕ ಸಂಕಷ್ಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ದೇವಸ್ಥಾನದ ಕೋಣೆಗಳಲ್ಲಿ ಒಂದು ಲಕ್ಷ ಕೋಟಿ ಮೌಲ್ಯದ ಹೇರಳ ಸಂಪತ್ತನ್ನು ಹೊಂದಿದ್ದ ಕೇರಳದ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲವು ಶ್ರೀಮಂತ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ದೇವಸ್ಥಾನವು ಈಚೆಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವುದಾಗಿ ಹೇಳಿದ್ದು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೋರಿದೆ. 

ದೇವಸ್ಥಾನದ ಆಡಳಿತವು ರಾಜ್ಯ ಸರ್ಕಾರಕ್ಕೆ ₹52 ಕೋಟಿಯ ನೆರವು ಕೋರಿವೆ. ಆದರೆ ಸರ್ಕಾರವು ಇದುವರೆಗೆ ಕೇವಲ ಸಾಲದ ರೂಪದಲ್ಲಿ ₹ 2 ಕೋಟಿ ನೀಡಿದೆ. ಹೆಚ್ಚಿನ ನೆರವಿಗಾಗಿ ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ಒತ್ತಾಯಿಸಲು ಪ್ರಯತ್ನಿಸುತ್ತಿವೆ.

ಸರ್ಕಾರವು ಈಗಾಗಲೇ ಮೊತ್ತವನ್ನು ಜಮಾ ಮಾಡಿದೆ. ಈಗ ಈ ವಿಷಯದ ಬಗ್ಗೆ ಮುಂದಿನ ನಿರ್ಧಾರಗಳನ್ನು ದೇವಾಲಯದ ಟ್ರಸ್ಟ್ ತೆಗೆದುಕೊಳ್ಳುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ನಿಂದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ.  ಸುಮಾರು 200 ಉದ್ಯೋಗಿಗಳ ವೇತನ ಮತ್ತು ಇತರ ಧಾರ್ಮಿಕ ವಿಧಿ ವಿಧಾನಗಳ ಖರ್ಚು ವೆಚ್ಚ ನಿರ್ವಹಿಸಲು ಪ್ರತಿ ತಿಂಗಳು ದೇವಾಲಯಕ್ಕೆ ₹1.25 ಕೋಟಿ ಅಗತ್ಯವಿದೆ. ಆದರೆ ಕೋವಿಡ್‌ನಿಂದ ದೇವಸ್ಥಾನದ ತಿಂಗಳ ಆದಾಯದಲ್ಲಿ ಇಳಿಕೆಯಾಗಿದೆ. ಕೋವಿಡ್‌ನಿಂದ ಹಲವಾರು ತಿಂಗಳುಗಳ ಕಾಲ ದೇವಾಲಯವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಆದ್ದರಿಂದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ಕೆಲವು ತಿಂಗಳ ಹಿಂದೆ ₹52 ಕೋಟಿ ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. 

ಕಳೆದ ಎರಡು ತಿಂಗಳು ಶಬರಿಮಲೆ ಯಾತ್ರೆಯ ಮಾಸದ ಸಂದರ್ಭದಲ್ಲಿ ಅಪಾರ ಭಕ್ತರ ಭೇಟಿಯಿಂದ ದೇವಸ್ಥಾನದ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ವಿವಿಧ ರಾಜ್ಯಗಳಿಂದ ಬಂದ ಭಕ್ತರು ಅನಂತಪದ್ಮನಾಭ ದೇವಾಲಯಕ್ಕೂ ಭೇಟಿ ನೀಡಿದ್ದಾರೆ. ಆದರೆ ಶಬರಿಮಲೆ ಯಾತ್ರೆಯು ಈ ವಾರ ಕೊನೆಗೊಳ್ಳುತ್ತದೆ. ಕೋವಿಡ್‌ ಸನ್ನಿವೇಶದ ಹದಗೆಟ್ಟ ಪರಿಸ್ಥಿತಿಯಿಂದ ಮತ್ತೆ ಭಕ್ತರ ಸಂಖ್ಯೆ ಕ್ಷೀಣಿಸಬಹುದು ಎಂದು ದೇವಾಲಯದ ಅಧಿಕಾರಿಗಳು ಕಳವಳಗೊಂಡಿದ್ದಾರೆ.

ದೇವಾಲಯಕ್ಕೆ ಆರ್ಥಿಕ ನೆರವಿನ ನಿರಾಕರಣೆಯನ್ನು ರಾಜಕೀಯಗೊಳಿಸಲು ಹಲವು ಹಿಂದೂ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ ನಾಯಕರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು