ಮಧುರೈ: ‘ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅದನ್ನು ಸಂಘರ್ಷ ಎಂದು ವ್ಯಾಖ್ಯಾನಿಸಲಾಗದು’ ಎಂದು ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅವರು ಪ್ರತಿಪಾದಿಸಿದ್ದಾರೆ.
ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸಂಘರ್ಷವಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ಶನಿವಾರ ತಳ್ಳಿಹಾಕಿದರು. ಸಚಿವರು ಮೈಲಾಡುತುರೈನಲ್ಲಿ ಸಿಜೆಎಂಸಿ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.
‘ಶಾಸಕಾಂಗ, ನ್ಯಾಯಾಂಗದ ನಡುವೆ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಭಿನ್ನಾಭಿಪ್ರಾಯಗಳಿವೆ. ಆದರರ್ಥ ಸಂಘರ್ಷವಿದೆ ಎಂಬುದಲ್ಲ. ಇಂತಹ ವರದಿಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಿದೆ. ಈಗ ಪ್ರಜಾಪ್ರಭುತ್ವದ ತೀವ್ರ ಕ್ರಿಯೆಗಳಿವೆ. ಅದು, ಬಿಕ್ಕಟ್ಟು ಅಲ್ಲ’ ಎಂದರು.
ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಅಥವಾ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸಚಿವರು ಈ ಮಾತು ಹೇಳಿದರು.
ನ್ಯಾಯಾಂಗವು ಸ್ವತಂತ್ರವಾಗಿರಬೇಕು ಎಂಬುದನ್ನು ಸರ್ಕಾರ ಬೆಂಬಲಿಸಲಿದೆ. ಕೋರ್ಟ್ ಮತ್ತು ವಕೀಲ ಸಂಘ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರ ಒಗ್ಗೂಡಿ ಕೆಲಸ ಮಾಡಬೇಕು. ಒಂದನ್ನು ಬಿಟ್ಟು ಇನ್ನೊಂದು ಇರಲಾಗದು. ಕೋರ್ಟ್ ಅಂಗಳದಲ್ಲಿ ಉತ್ತಮ ವಾತಾವರಣ ಇರಬೇಕು ಎಂದು ಹೇಳಿದರು.
ಈ ವರ್ಷ ಸರ್ಕಾರ ವಿವಿಧ ರಾಜ್ಯಗಳ ಕೋರ್ಟ್‌ಗಳಿಗೆ ಒಟ್ಟು ₹ 9,000 ಕೋಟಿ ಹಂಚಿಕೆ ಮಾಡಿದೆ. ಹೆಚ್ಚು ಅನುದಾನ ಕೇಳಲು ಅನುವಾಗುವಂತೆ ಹಂಚಿಕೆಯಾದ ಅನುದಾನದ ಪೂರ್ಣ ಬಳಕೆಗೆ ಸಚಿವಾಲಯ ಒತ್ತು ನೀಡಿದೆ. ನ್ಯಾಯಾಂಗ ಪೂರ್ಣವಾಗಿ ಕಾಗದ ರಹಿತವಾಗಿರಬೇಕು ಎಂದೂ ಸರ್ಕಾರ ಬಯಸಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.