ಶುಕ್ರವಾರ, ಜನವರಿ 21, 2022
30 °C

'ನರ್ಮದಾ ಪರಿಕ್ರಮ'ದಲ್ಲಿ ಆರೆಸ್ಸೆಸ್, ಶಾ ನೆರವನ್ನು ಶ್ಲಾಘಿಸಿದ ದಿಗ್ವಿಜಯ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಪ್ರತೀ ಬಾರಿ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು, ನಾಲ್ಕು ವರ್ಷಗಳ ಹಿಂದೆ ತಮ್ಮ 'ನರ್ಮದಾ ಪರಿಕ್ರಮ' ದಲ್ಲಿ ಅಮಿತ್ ಶಾ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಹೇಗೆ ಸಹಾಯ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ, ಪತ್ರಕರ್ತೆ ಅಮೃತಾ 2017 ರಲ್ಲಿ ನರ್ಮದಾ ನದಿಯ ದಡದಲ್ಲಿ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆಯನ್ನು ಕೈಗೊಂಡಿದ್ದರು.

‘ನಾವು ರಾತ್ರಿ 10 ಗಂಟೆಗೆ ಗುಜರಾತ್‌ನ ನಮ್ಮ ಗುರಿ ತಲುಪಿದೆವು. ಆದರೆ, ಅಲ್ಲಿನ ಅರಣ್ಯ ಪ್ರದೇಶದಲ್ಲಿ ಯಾವುದೇ ದಾರಿ ಇರಲಿಲ್ಲ ಮತ್ತು ರಾತ್ರಿಯ ವಾಸ್ತವ್ಯಕ್ಕೆ ಯಾವುದೇ ಸೌಲಭ್ಯವಿರಲಿಲ್ಲ’ಎಂದು ಸಿಂಗ್ ಅವರು ತಮ್ಮ ದೀರ್ಘಕಾಲದ ಸಹವರ್ತಿ ಒ ಪಿ ಶರ್ಮಾ ಅವರು ಬರೆದಿರುವ‘ನರ್ಮದಾ ಕೆ ಪಥಿಕ್’ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

‘ಆ ಸಂದರ್ಭ, ಅರಣ್ಯ ಅಧಿಕಾರಿಯೊಬ್ಬರು ನಮ್ಮ ಬಳಿಗೆ ಬಂದರು. ನಮಗೆ ಸಂಪೂರ್ಣವಾಗಿ ಸಹಕರಿಸುವಂತೆ ಅಮಿತ್ ಶಾ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದ್ದನ್ನು ಕೇಳಿ ಆಶ್ಚರ್ಯವಾಯಿತು’ಎಂದು ಸಿಂಗ್ ಹೇಳಿದರು. ‘ಅಂದು (ಗುಜರಾತ್‌ನಲ್ಲಿ) ಚುನಾವಣೆಗಳು ನಡೆಯುತ್ತಿದ್ದವು. ನಾನು, ಬಿಜೆಪಿಯ ಅತಿದೊಡ್ಡ ಟೀಕಾಕಾರನಾಗಿದ್ದೆ. ಆದರೆ, ನಮ್ಮ ಯಾತ್ರೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಅವರು (ಶಾ) ನೋಡಿಕೊಂಡರು. ಪರ್ವತಗಳ ಮೂಲಕ ಅವರು(ಅರಣ್ಯಾಧಿಕಾರಿ) ನಮಗೆ ದಾರಿ ತೋರಿಸಿದರು ಮತ್ತು ನಮಗೆಲ್ಲರಿಗೂ ಆಹಾರದ ವ್ಯವಸ್ಥೆ ಮಾಡಿದರು’ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಸಿಂಗ್ ಅವರು ಸೆಪ್ಟೆಂಬರ್ 30, 2017 ರಂದು ನರಸಿಂಗಪುರ ಜಿಲ್ಲೆಯ ಬರ್ಮನ್ ಘಾಟ್‌ನಿಂದ ಆರು ತಿಂಗಳುಗಳ 3000 ಕಿಮೀ ದೂರದ ಪ್ರಯಾಣವನ್ನು ಆರಂಭಿಸಿದ್ದರು.

‘ಇಲ್ಲಿಯವರೆಗೆ ನಾನು ಶಾ ಅವರನ್ನು ಭೇಟಿ ಮಾಡಿಲ್ಲ, ಆದರೆ, ನನ್ನ ಸಂಪರ್ಕಗಳ ಮೂಲಕ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ’ಎಂದು ಅವರು ಹೇಳಿದರು. ಇದು ‘ಸ್ನೇಹ ಹಾಗೂ ರಾಜಕೀಯ ಮತ್ತು ಸಿದ್ಧಾಂತಕ್ಕೆ ಯಾವುದೇ ಸಂಬಂಧವಿಲ್ಲ’ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ಪ್ರಬಲ ವಿಮರ್ಶಕರಾಗಿದ್ದರೂ, ಅದರ ಕಾರ್ಯಕರ್ತರು ಯಾತ್ರೆಯಲ್ಲಿ ನನ್ನನ್ನು ಭೇಟಿ ಮಾಡುತ್ತಿದ್ದರು ಎಂದು ಸಿಂಗ್ ಹೇಳಿದರು. ‘ಅವರು ಯಾಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದೆ, ಅದಕ್ಕವರು, ನನ್ನನ್ನು ಭೇಟಿಯಾಗಲು ಆದೇಶವಿದೆ ಎಂದು ಹೇಳಿದರು’ಎಂದು ಸಿಂಗ್ ಹೇಳಿದರು.

‘ನಾವು ಭರುಚ್ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಆರ್‌ಎಸ್‌ಎಸ್ ಕಾರ್ಯಕರ್ತರು ಒಂದು ದಿನ ಮಾಂಝಿ ಸಮಾಜ ಧರ್ಮಶಾಲಾದಲ್ಲಿ ನಮ್ಮ ಗುಂಪಿನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಅಲ್ಲಿನ ಸಭಾಂಗಣದಲ್ಲಿ ಆರ್‌ಎಸ್‌ಎಸ್ ಪ್ರಮುಖರಾದ ಕೇಶವ್ ಬಲಿರಾಮ್ ಹೆಡ್ಗೆವಾರ್ ಮತ್ತು ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಅವರ ಫೋಟೋಗಳಿದ್ದವು’ಎಂದು ದಿಗ್ವಿಜಯ್ ಸಿಂಗ್ ನೆನಪು ಮಾಡಿಕೊಂಡರು.

ಧರ್ಮ ಮತ್ತು ರಾಜಕೀಯ ಬೇರೆ ಬೇರೆಯಾಗಿದೆ ಎಂದು ಜನರಿಗೆ ತಿಳಿಸಲು ಈ ಎಲ್ಲವನ್ನು ಪ್ರಸ್ತಾಪಿಸುತ್ತಿರುವುದಾಗಿ ಸಿಂಗ್ ಹೇಳಿದರು. ತಮ್ಮ ತೀರ್ಥಯಾತ್ರೆಯಲ್ಲಿ ಅವರು ಎಲ್ಲರಿಂದ ಸಹಾಯ ಪಡೆದಿದ್ದಾಗಿ ಹೇಳಿದರು..

ಬಿಜೆಪಿಯ ಯುವ ಘಟಕದನಾಯಕ ಮತ್ತು ಇತರ ಮೂವರು ಬಿಜೆಪಿ ಕಾರ್ಯಕರ್ತರು ಅವರ ಗುಂಪಿನ ಭಾಗವಾಗಿದ್ದರು. ಅವರು ಈಗ ನಮ್ಮ 'ನರ್ಮದಾ ಕುಟುಂಬದ' ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು