ನವದೆಹಲಿ (ಪಿಟಿಐ): ಕೋವಿಡ್ ವಿರುದ್ದ ರಕ್ಷಣೆಗೆ ನೀಡಲಾಗುತ್ತಿದ್ದ ಲಸಿಕೆಯ ದೈನಿಕ ಸರಾಸರಿ ಪ್ರಮಾಣ ಜೂನ್ 21ರ ನಂತರ ಕಡಿಮೆಯಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ, ಜೂನ್ 21–27ರ ನಡುವೆ ನಿತ್ಯ ಸರಾಸರಿ 61.14 ಲಕ್ಷ ಡೋಸ್ ಲಸಿಕೆ ನೀಡಿದ್ದರೆ, ಜೂನ್ 28–ಜುಲೈ4 ನಡುವೆ 41.92 ಲಕ್ಷ ಡೋಸ್ ನೀಡಲಾಗಿದೆ.
ಜುಲೈ 5–11ರ ನಡುವಣ ಅವಧಿಯಲ್ಲಿ ನಿತ್ಯದ ಲಸಿಕೆ ನೀಡಿಕೆ ಸರಾಸರಿ 34.32 ಲಕ್ಷ ಡೋಸ್‌ಗೆ ಇಳಿದಿದೆ. ರಾಜ್ಯಗಳ ಪೈಕಿ ಕರ್ನಾಟಕ, ಹರಿಯಾಣ, ಗುಜರಾತ್, ಛತ್ತೀಸಗಡ ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಕುಗ್ಗಿದೆ.
ಉಳಿದಂತೆ ಕೇರಳ, ಅಂಡಮಾನ್, ನಿಕೋಬಾರ್ ದ್ವೀಪ, ದಾದ್ರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಲಸಿಕೆ ನೀಡಿಕೆ ಸಾಧನೆಯಲ್ಲಿ ಮಿಶ್ರ ಸ್ಪಂದನೆ ಇದೆ. ತ್ರಿಪುರಾದಲ್ಲಿ ಲಸಿಕೆ ನೀಡುವ ಪ್ರಮಾಣ ಏರುಗತಿಯಲ್ಲಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.54 ಕೋಟಿ ಡೋಸ್ ಲಸಿಕೆ ಬಾಕಿ ಉಳಿದಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿಯನ್ನು ನೀಡಿದೆ. ಮಹಾರಾಷ್ಟ್ರ ಸೇರಿದಂತೆ ಕೋವಿಡ್ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಅಗತ್ಯವಿದೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು, ಅರ್ಹರಾಗಿರುವ ಎಲ್ಲರಿಗೆ ನೀಡಲು ರಾಜ್ಯಕ್ಕೆ ಮಾಸಿಕ ಕನಿಷ್ಠ 3 ಕೋಟಿ ಲಸಿಕೆ ಅಗತ್ಯವಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಅಂದಾಜಿರುವಂತೆ, ಗುಜರಾತ್ ರಾಜ್ಯದಲ್ಲಿ ಎಲ್ಲ ಅರ್ಹರಿಗೆ ಲಸಿಕೆ ನೀಡಲು ಒಟ್ಟಾರೆ 9.6 ಕೋಟಿ ಡೋಸ್ ಲಸಿಕೆ ಅಗತ್ಯವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.