ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ, ನಿಕಿತಾ, ಶಾಂತನು ಎಂಬುವವರಿಂದ 'ಟೂಲ್‌ಕಿಟ್‌' ಸೃಷ್ಟಿ: ಪೊಲೀಸ್‌ ಇಲಾಖೆ

Last Updated 15 ಫೆಬ್ರುವರಿ 2021, 15:34 IST
ಅಕ್ಷರ ಗಾತ್ರ

ನವದೆಹಲಿ: 'ಪರಿಸರ ಹೋರಾಟಗಾರ್ತಿ ದಿಶಾ ರವಿ, ಮುಂಬೈ ವಕೀಲೆ ನಿಕಿತಾ ಜಾಕೋಬ್ ಮತ್ತು ಪುಣೆ ಮೂಲದ ಎಂಜಿನಿಯರ್ ಶಾಂತನು ಎಂಬುವವರು ರೈತರ ಹೋರಾಟಕ್ಕೆ ಸಂಬಂಧಿಸಿದ 'ಟೂಲ್‌ಕಿಟ್‌' ಅನ್ನು ರಚಿಸಿದ್ದಾರೆ. ಅಲ್ಲದೆ, ಭಾರತದ ಹೆಸರು ಕೆಡಿಸಲು ಇತರರೊಂದಿಗೆ ಹಂಚಿಕೊಂಡಿದ್ದಾರೆ,' ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಬಂಧಿಸಲ್ಪಟ್ಟ ದಿಶಾ ರವಿ, ಟೆಲಿಗ್ರಾಮ್ ಆ್ಯಪ್ ಮೂಲಕ ಪರಿಸರ ಹೋರಾಟಗಾರ್ತಿ ಗ್ರೆತಾ ಥನ್‌ಬರ್ಗ್‌ಗೆ ಟೂಲ್‌ ಕಿಟ್‌ ಅನ್ನು ಕಳುಹಿಸಿದ್ದರು. ಅದರಂತೆ ನಡೆದುಕೊಳ್ಳಲು ಗ್ರೆತಾಗೆ ದಿಶಾ ನೆರವಾಗಿದ್ದರು. ದತ್ತಾಂಶಗಳನ್ನೆಲ್ಲ ಡಿಲಿಟ್‌ ಮಾಡಲಾಗಿದೆ. ದಿಶಾ ಅವರ ಟೆಲಿಗ್ರಾಂ ಖಾತೆಯಲ್ಲಿ ಟೂಲ್‌ಕಿಟ್‌ಗೆ ಸಂಬಂಧಿಸಿದ ಹಲವು ಲಿಂಕ್‌ಗಳು ಸಿಕ್ಕಿವೆ,' ಎಂದು ಪೊಲೀಸರು ಹೇಳಿದ್ದಾರೆ.

'ಟೂಲ್‌ಕಿಟ್‌ನ ಪ್ರಮುಖ ಕಡತವನ್ನು ಹಂಚಲು ಸೃಷ್ಟಿ ಮಾಡಿದ್ದ ವಾಟ್ಸಾಪ್‌ ಗ್ರೂಪನ್ನೂ ದಿಶಾ ಡಿಲಿಟ್‌ ಮಾಡಿದ್ದಾರೆ. ಈ ಕಡತವು ಗೂಗಲ್‌ ಡಾಕ್ಸ್‌ ಜೊತೆಗೆ ಬೆಸೆದುಕೊಂಡಿದ್ದು, ಇದರಲ್ಲಿನ ಬಹುತೇಕ ವಿಷಯಗಳು ಖಲಿಸ್ತಾನ ಪರ ವಿಷಯಗಳನ್ನು ಒಳಗೊಂಡಿತ್ತು. ಭಾರತದ ಹೆಸರು ಕೆಡಿಸುವುದೇ ಟೂಲ್‌ಕಿಟ್‌ನ ಪ್ರಮುಖ ಉದ್ದೇಶವಾಗಿತ್ತು,' ಎಂದು ದೆಹಲಿಯ ಪೊಲೀಸ್‌ ಇಲಾಖೆಯ ಸೈಬರ್‌ ವಿಭಾಗದ ಜಂಟಿ ಆಯುಕ್ತ ಪ್ರೇಮ್‌ನಾಥ್‌ ಹೇಳಿದ್ದಾರೆ.

ಎಂಜಿನಿಯರ್‌ ಶಾಂತನು ಸೃಷ್ಟಿ ಮಾಡಿದ್ದ ಇ ಮೇಲ್‌ ಮೂಲಕ ಟೂಲ್‌ಕಿಟ್‌ ಗೂಗಲ್‌ ಡಾಕ್ಯುಮೆಂಟ್‌ ಸೇರಿದೆ. ಖಲಿಸ್ಥಾನ ಪರ ಸಂಘಟನೆ 'ಪೊಯೆಟಿಕ್‌ ಜಸ್ಟೀಸ್‌ ಫೌಂಡೇಷನ್‌ನ ಸಂಸ್ಥಾಪಕ ಮೊ ದಲಿವಾಲ್‌ ಎಂಬುವವರು ಕೆನಡಾ ಮೂಲದ ಪುನೀತ್‌ ಎಂಬ ಮಹಿಳೆ ಮೂಲಕ ಇವರನ್ನು ಸಂಪರ್ಕಿಸಿದ್ದರು,' ಎಂದು ಪೊಲೀಸರು ಹೇಳಿದ್ದಾರೆ.

'ನಿಕಿತಾ, ಶಾಂತನು, ದಿಶಾ ಮತ್ತು ಇತರರು ಟೂಲ್‌ಕಿಟ್‌ ಸೃಷ್ಟಿ ಮಾಡುವುದರಲ್ಲಿ ಪರಸ್ಪರ ತೊಡಗಿಸಿಕೊಂಡಿದ್ದರು. ನಿಕಿತಾ ಅವರ ಫೋನ್‌ನಲ್ಲಿ ಸಿಕ್ಕ ಮಾಹಿತಿಯ ಆಧಾರದ ಮೇಲೆ ಹಲವು ತಂಡಗಳನ್ನು ಮಹಾರಾಷ್ಟ್ರದ ಬೀಡ್‌ ಜಿಲ್ಲೆಗೆ ಮತ್ತು ಬೆಂಗಳೂರಿಗೆ ಕಳುಹಿಸಲಾಗಿದೆ. ಶಾಂತನು ಬೀಡ್‌ನ ಆತನ ಮನೆಯಲ್ಲಿ ಪತ್ತೆಯಾಗಿಲ್ಲ. ಆತನಿಗಾಗಿ ಶೋಧ ನಡೆಯುತ್ತಿದೆ. ನಿಕಿತಾ ಕೂಡ ತಲೆಮರೆಸಿಕೊಂಡಿದ್ದಾರೆ,' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT