ಮಂಗಳವಾರ, ಸೆಪ್ಟೆಂಬರ್ 27, 2022
27 °C

ರಾಷ್ಟ್ರಪತಿ ಮುರ್ಮು ಪ್ರಮಾಣ: ಅತ್ಯುನ್ನತ ಹುದ್ದೆಗೆ ಏರಿದ ಮೊದಲ ಆದಿವಾಸಿ ವ್ಯಕ್ತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಸೋಮವಾರ ಬೆಳಿಗ್ಗೆ 10.15ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಪ್ರಮಾಣವಚನ ಬೋಧಿಸಿದರು. 

ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ಏರುವ ಮೂಲಕ ಹಲವು ಪ್ರಥಮಗಳ ದಾಖಲೆ ಬರೆದಿದ್ದಾರೆ. ಅವರು ರಾಷ್ಟ್ರಪತಿ ಹುದ್ದೆಗೇರಿದ ಆದಿ
ವಾಸಿ ಸಮುದಾಯದ ಮೊದಲ ವ್ಯಕ್ತಿ. ಸ್ವಾತಂತ್ರ್ಯಾನಂತರ ಹುಟ್ಟಿ ರಾಷ್ಟ್ರಪತಿ
ಯಾದ ಮೊದಲ ವ್ಯಕ್ತಿ ಮತ್ತು ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗಳಿಗೆ ಅವರು ಪಾತ್ರರಾಗಿದ್ದಾರೆ. 

ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಎರಡನೇ ಮಹಿಳೆ ಇವರು. ದೇವರ ಹೆಸರಿನಲ್ಲಿ ಹಿಂದಿಯಲ್ಲಿ ಅವರು ಪ್ರಮಾಣವಚನ ಪಡೆದುಕೊಂಡರು. 

ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

‘ಭಾರತದಲ್ಲಿ ಬಡವರು ಕನಸು ಕಾಣುವುದು ಮಾತ್ರವಲ್ಲ ಅದನ್ನು ಈಡೇರಿಸಿಕೊಳ್ಳಲೂಬಹುದು ಎಂಬುದಕ್ಕೆ ನನ್ನ ಆಯ್ಕೆಯು ಪುರಾವೆಯಾಗಿದೆ’ ಎಂದು ಪ್ರಮಾಣವಚನದ ನಂತರ ಮುರ್ಮು ಹೇಳಿದರು. 

ಶತಮಾನಗಳಿಂದ ಸೌಲಭ್ಯ ವಂಚಿತರಾಗಿರುವವರು, ಬಡವರು, ಶೋಷಿತರು, ಹಿಂದುಳಿದವರು ಮತ್ತು ಆದಿವಾಸಿಗಳು ತಮ್ಮಲ್ಲಿ ಅವರ ಪ್ರತಿಬಿಂಬವನ್ನು ಕಾಣುತ್ತಿರುವುದು ತಮಗೆ ಬಹುದೊಡ್ಡ ತೃಪ‍್ತಿ ತಂದಿದೆ ಎಂದರು. 

ಪ್ರಾಥಮಿಕ ಶಿಕ್ಷಣ ಪಡೆಯುವುದೇ ಕನಸಾಗಿದ್ದಂತಹ ಒಡಿಶಾದ ಸಣ್ಣ ಆದಿವಾಸಿ ಗ್ರಾಮದಿಂದ ಆರಂಭವಾದ ತಮ್ಮ ಜೀವನದ ಪಯಣವನ್ನು ಮುರ್ಮು ಅವರು ಮೆಲುಕು ಹಾಕಿದರು. ಆ ಗ್ರಾಮದಿಂದ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಹುಡುಗಿ ತಾವು ಎಂಬುದನ್ನೂ ಅವರು ನೆನಪಿಸಿಕೊಂಡರು. 

ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ ಮುರ್ಮು ಅವರನ್ನು ಕೋವಿಂದ್ ಅವರು ಕರೆತರುವುದರೊಂದಿಗೆ ಪ್ರಮಾಣವಚನ ವಿಧಿಗಳು ಆರಂಭಗೊಂಡವು. ಉ‍ಪರಾಷ್ಟ್ರಪತಿ, ಪ್ರಧಾನಿ, ಲೋಕಸಭೆಯ ಸ್ಪೀಕರ್‌ ಅವರು ಮುರ್ಮು ಅವರನ್ನು ಸಂಸತ್ತಿನಲ್ಲಿ ಸ್ವಾಗತಿಸಿದರು.  

ಮೂರೂ ಸೇನಾ ಪಡೆಗಳು ಮುರ್ಮು ಅವರಿಗೆ ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸಲ್ಲಿಸಿದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು