ಗುರುವಾರ , ಮೇ 19, 2022
20 °C

ಶಿಯೋಮಿ ಜಾಗತಿಕ ಉಪಾಧ್ಯಕ್ಷ ಜೈನ್‌ಗೆ ಇ.ಡಿ ಸಮನ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಸಂಬಂಧ ತನಿಖೆಗಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ಶಿಯೋಮಿಯ ಜಾಗತಿಕ ಉಪಾಧ್ಯಕ್ಷ ಮನುಕುಮಾರ್ ಜೈನ್ ಅವರಿಗೆ ಸಮನ್ಸ್ ನೀಡಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ಕಳೆದ ಕೆಲವು ವರ್ಷಗಳಿಂದ ಗಳಿಸಿರುವ ಕೋಟ್ಯಂತರ ಮೌಲ್ಯದ ವಿದೇಶಿ ಹಣಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್‌ಇಎಂಎ) ನಿಬಂಧನೆಗಳ ಅಡಿಯಲ್ಲಿ ಶಿಯೋಮಿ ಕಂಪನಿ ಮತ್ತು ಅದರ ಕಾರ್ಯನಿರ್ವಾಹಕ ಅಧಿಕಾರಿಯನ್ನು ತನಿಖೆಗೆ ಒಳಪಡಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಶಿಯೋಮಿ ಕಂಪನಿಯ ಭಾರತ ವಿಭಾಗದ ಮಾಜಿ ಮುಖ್ಯಸ್ಥರಾಗಿರುವ ಮನುಕುಮಾರ್ ಜೈನ್ ಅವರನ್ನು ಬುಧವಾರ ಖುದ್ದಾಗಿ ಹಾಜರಾಗುವ ಮೂಲಕ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಕಂಪನಿಗೆ ಸಂಬಂಧಿಸಿದ ಹಲವು ಹಣಕಾಸಿನ ದಾಖಲೆಗಳನ್ನು ಒದಗಿಸುವಂತೆಯೂ ಇ.ಡಿ ಕೇಳಿದೆ.

ಶಿಯೋಮಿ ಕಂಪನಿಯ ಷೇರುಗಳು, ನಿಧಿಯ ಮೂಲ, ಮಾರಾಟಗಾರರ ಜೊತೆಗಿನ ಒಪ್ಪಂದಗಳು ಮತ್ತು ಕಂಪನಿಯು ಭಾರತದಲ್ಲಿ ಮಾಡಿರುವ ನಿರ್ವಹಣಾ ವೆಚ್ಚ ಹಾಗೂ ವಿದೇಶಕ್ಕೆ ಕಳುಹಿಸಲಾದ ಪಾವತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಯು ಜೈನ್ ಅವರನ್ನು ಕೇಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇ.ಡಿ ಸೂಚನೆಗೆ ಪ್ರತಿಕ್ರಿಯಿಸಿರುವ ಶಿಯೋಮಿ ಕಂಪನಿಯ ವಕ್ತಾರರು, ‘ನಮ್ಮ ಕಂಪನಿಯು ಕಾನೂನನ್ನು ಪಾಲಿಸುವ ಜವಾಬ್ದಾರಿಯುತವಾದ ಕಂಪನಿ. ಇ.ಡಿ ಕೇಳಿರುವ ಎಲ್ಲ ಮಾಹಿತಿಯನ್ನು ಒದಗಿಸಲು ಬದ್ಧರಾಗಿದ್ದು, ತನಿಖಾಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

2021ರ ಡಿಸೆಂಬರ್‌ನಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ಶಿಯೋಮಿ ಸೇರಿದಂತೆ ದೇಶದಲ್ಲಿರುವ ಚೀನಾದ ಇತರ ಕೆಲವು ಮೊಬೈಲ್ ಉತ್ಪಾದನಾ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು