ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ: ಸಂಜಯ್ ರಾವುತ್ ಪತ್ನಿಗೆ ಇ.ಡಿ ಸಮನ್ಸ್

Last Updated 4 ಆಗಸ್ಟ್ 2022, 12:30 IST
ಅಕ್ಷರ ಗಾತ್ರ

ಮುಂಬೈ: ಪತ್ರ ಚಾಲ್ ಭೂಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ, ವರ್ಷಾ ರಾವುತ್ ಅವರಿಗೆ ಜಾರಿ ನಿರ್ದೇಶನಾಲಯ(ಇ.ಡಿ) ಸಮನ್ಸ್ ಜಾರಿ ಮಾಡಿದೆ.

ವರ್ಷಾ ರಾವುತ್ ಬ್ಯಾಂಕ್ ಖಾತೆಗಳಿಂದ ಹಣದ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಪತ್ತೆಯಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಈ ಮಧ್ಯೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಇ.ಡಿ ಕಸ್ಟಡಿಯನ್ನು ಮುಂಬೈನ ವಿಶೇಷ ನ್ಯಾಯಾಲಯವು ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ತನಿಖೆಯಲ್ಲಿ ಇ.ಡಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಗೋರೆಗಾಂವ್‌ನಲ್ಲಿ ಪತ್ರಾ ಚಾಲ್ ಮರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಜಯ್ ರಾವುತ್, ಅವರ ಪತ್ನಿ ಮತ್ತು ಇತರ ಸಹಚರರು ಹಣಕಾಸಿನ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಯು ಭಾನುವಾರ ಮಧ್ಯರಾತ್ರಿ ರಾವುತ್ ಅವರನ್ನು ಬಂಧಿಸಿತ್ತು. ಸೋಮವಾರ, ನ್ಯಾಯಾಲಯವು ಅವರನ್ನು ಆಗಸ್ಟ್ 4 ರವರೆಗೆ ಇ.ಡಿ ಕಸ್ಟಡಿಗೆ ನೀಡಿತ್ತು.

ರಾವುತ್ ಅವರ ಆರಂಭಿಕ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಯು ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರ ಮುಂದೆ ಹಾಜರುಪಡಿಸಿತ್ತು. ಹೆಚ್ಚಿನ ತನಿಖೆಗಾಗಿ ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ಅದು ಕೋರಿತ್ತು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ನ್ಯಾಯಾಲಯವು ಕಸ್ಟಡಿಯನ್ನು ವಿಸ್ತರಿಸಿತು.

ವಸತಿ ಮರು ಅಭಿವೃದ್ಧಿ ಯೋಜನೆಯಲ್ಲಿ ಆಪಾದಿತ ಸಂಜಯ್ ರಾವುತ್ ಮತ್ತು ಅವರ ಕುಟುಂಬವು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿದೆ ಎಂದು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT