ಮಂಗಳವಾರ, ಮೇ 17, 2022
29 °C

ವಲಸಿಗರಿಗಿಲ್ಲ ಮಣೆ: ಪಶ್ಚಿಮ ಬಂಗಾಳ ಬಿಜೆಪಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ, ಮೊದಲೇ ಪಕ್ಷದಲ್ಲಿ ಇದ್ದವರು ಮತ್ತು ಈಗ ಬೇರೆ ಪಕ್ಷಗಳಿಂದ ಬಂದವರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಹಾಗಾಗಿ, ಟಿಎಂಸಿ ಮತ್ತು ಇತರ ಪಕ್ಷಗಳಿಂದ ಬರುವ ಮುಖಂಡರನ್ನು ಬಿಜೆಪಿಗೆ ಸಾಮೂಹಿಕವಾಗಿ ಸೇರಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ದೃಢಪಡಿಸಿದ್ದಾರೆ.

‘ಬಿಜೆಪಿ ಸೇರುವ ಇಚ್ಛೆ ಇರುವ ಕನಿಷ್ಠ 40 ಶಾಸಕರ ಪಟ್ಟಿಯು ತಮ್ಮ ಬಳಿ ಇದೆ. ಇವರಲ್ಲಿ ಹೆಚ್ಚಿನವರು ತೃಣಮೂಲ ಕಾಂಗ್ರೆಸ್‌ನವರು. ಆದರೆ, ಇವರೆಲ್ಲರನ್ನೂ ನೇರವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸುತ್ತೇವೆ. ಗೋವು ಮತ್ತು ಕಲ್ಲಿದ್ದಲು ಕಳ್ಳ ಸಾಗಾಟದಂತಹ ಅಕ್ರಮ ‍ಕೃತ್ಯಗಳಲ್ಲಿ ಭಾಗಿಯಾದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದು ವಿಜಯವರ್ಗೀಯ ಹೇಳಿದ್ದಾರೆ. ಬಿಜೆಪಿಯನ್ನು ಟಿಎಂಸಿಯ ಬಿ–ತಂಡ ಮಾಡಲು ಬಯಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.  

ಯಾರು ಬೇಕಿದ್ದರೂ ಬಿಜೆಪಿ ಸೇರಬಹುದು ಎಂಬ ಪರಿಸ್ಥಿತಿ ಈಗ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ. 

ವಿಧಾನಸಭೆಗೆ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗೆ ಬೇಡಿಕೆ ಇಟ್ಟೇ ಹಲವರು ಪಕ್ಷಕ್ಕೆ ಸೇರುತ್ತಿದ್ದಾರೆ. ಆದರೆ, ಇದು ಪಕ್ಷದಲ್ಲಿ ಮೊದಲೇ ಇದ್ದವರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ, ಈ ವರ್ಗದ ಅಸಮಾಧಾನ ತಣಿಸುವುದಕ್ಕಾಗಿ ಹೊರಗಿನಿಂದ ಬಂದವರಿಗೆ ಮಣೆ ಹಾಕುವುದಿಲ್ಲ ಎಂಬ ನಿರ್ಧಾರಕ್ಕೆ ಪಕ್ಷವು ಬಂದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಒಂದೊಂದು ಕ್ಷೇತ್ರದಲ್ಲಿಯೂ 30–50 ಮಂದಿ ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ ಎಂದೂ ಮೂಲಗಳು ಹೇಳಿವೆ. 

ಕೇಂದ್ರದ ನಾಯಕತ್ವವನ್ನು ಮೆಚ್ಚಿಸುವುದಕ್ಕಾಗಿ ಕಂಡಕಂಡವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜ್ಯ ಬಿಜೆಪಿ ಘಟಕದ ಕೆಲವರು ಯತ್ನಿಸುತ್ತಿದ್ದಾರೆ. ಇದು ಕೂಡ ಕೇಂದ್ರದ ನಾಯಕರ ಗಮನಕ್ಕೆ ಬಂದಿದೆ. ಬೇರೆ ಪಕ್ಷದವರನ್ನು ಸೇರಿಸಿಕೊಳ್ಳುವುದಕ್ಕೆ ತಡೆ ಒಡ್ಡಲು ಇದೂ ಒಂದು ಕಾರಣ ಎನ್ನಲಾಗಿದೆ. 

---------

ಟಿಎಂಸಿಯ ಮತ್ತೊಬ್ಬ ಶಾಸಕ ಬಿಜೆಪಿಗೆ

ಡೈಮಂಡ್‌ ಹಾರ್ಬರ್‌ನ ಟಿಎಂಸಿ ಶಾಸಕ ದೀಪಕ್‌ ಹಲ್ದಾರ್‌ ಅವರು ಬಿಜೆಪಿಗೆ ಮಂಗಳವಾರ ಸೇರ್ಪಡೆಯಾಗಿದ್ದಾರೆ. ಅವರು ಟಿಎಂಸಿಗೆ ಸೋಮವಾರ ರಾಜೀನಾಮೆ ನೀಡಿದ್ದರು. ಟಿಎಂಸಿಯಿಂದ ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ ಮತ್ತು ರಾಜೀವ್‌ ಬ್ಯಾನರ್ಜಿ ಅವರು ಉಪಸ್ಥಿತರಿದ್ದ ಸಾರ್ವಜನಿಕ ಸಮಾರಂಭದಲ್ಲಿ ಹಲ್ದಾರ್‌ ಬಿಜೆಪಿ ಸೇರಿದರು. 

ಬೇರೆ ಪಕ್ಷದ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರದ ಬಳಿಕವೂ ಹಲ್ದಾರ್‌ ಅವರ ಸೇರ್ಪಡೆ ಏಕೆ ಎಂಬ ಪ್ರಶ್ನೆಗೆ, ‘ಅವರು ಸಮರ್ಥ ಸಂಘಟಕ. ಹಾಗಾಗಿ, ಈ ನಿಯಮದಿಂದ ಅವರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಪಕ್ಷವು ತಿಳಿಸಿದೆ. 

ಜನರ ಪರವಾಗಿ ಕೆಲಸ ಮಾಡಲು ಟಿಎಂಸಿ ಅವಕಾಶ ಕೊಡುತ್ತಿಲ್ಲ ಎಂದು ಹಲ್ದಾರ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿಯ ಮುಖಂಡ ಪಿರ್ಹಾದ್‌ ಹಕೀಮ್‌, ‘ಇವೆಲ್ಲವೂ ಅತೃಪ್ತ ಆತ್ಮಗಳು. ಅವರ ದುರಾಸೆ ಬೆಳೆಯುತ್ತಲೇ ಇರುತ್ತದೆ’ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು