ಬುಧವಾರ, ಮಾರ್ಚ್ 22, 2023
19 °C

ಪತ್ರ ತಡೆಹಿಡಿದ ಜೈಲು ಅಧೀಕ್ಷಕ: ಕೋರ್ಟ್‌ ಮೊರೆ ಹೋದ ತೇಲ್‌ತುಂಬ್ಡೆ ಪತ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ತಮ್ಮ ಪತಿಯು ವಕೀಲರು ಮತ್ತು ಸಂಬಂಧಿಕರಿಗೆ ಬರೆದಿರುವ ಪತ್ರಗಳನ್ನು ತಾಲೋಜ ಜೈಲಿನ ಅಧೀಕ್ಷಕರು ಉದ್ದೇಶಪೂರ್ವಕಾಗಿ ತಡೆ ಹಿಡಿದು, ಅವುಗಳನ್ನು ತಡವಾಗಿ ತಲುಪಿಸುತ್ತಿದ್ದಾರೆ ಎಂದು ದೂರಿ ಎಲ್ಗರ್ ಪರಿಷತ್ –ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಆನಂದ್‌ ತೇಲ್‌ತುಂಬ್ಡೆ ಅವರ ಪತ್ನಿ ರಮಾ ತೇಲ್‌ತುಂಬ್ಡೆ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಕೀಲರಾದ ಆರ್. ಸತ್ಯನಾರಾಯಣ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ‘ಸಾರ್ವಜನಿಕ ವಲಯದ ಕೆಲವು ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯ ಕುರಿತು ಪತಿ ಆನಂದ್ ಅವರು ಬರೆದ ಲೇಖನವೊಂದು ಮಾರ್ಚ್‌ 10ರಂದು  ‘ಕಾರವಾನ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ನಂತರ ಜೈಲಿನ ಅಧೀಕ್ಷಕರು ಆನಂದ್ ಅವರ ಪತ್ರಗಳನ್ನು ಉದ್ದೇಶಪೂರ್ವಕಾಗಿ ತಡೆಹಿಡಿದು, ವಿಳಂಬವಾಗಿ ಪೋಸ್ಟ್ ಮಾಡುತ್ತಿದ್ದಾರೆ’ ಎಂದು ರಮಾ ಅವರು  ಆರೋಪಿಸಿದ್ದಾರೆ.

‘ಆನಂದ್ ಅವರ ಪತ್ರಗಳನ್ನಷ್ಟೇ ಅಲ್ಲ, ಜೈಲಿನಲ್ಲಿರುವ ಇತರ ಸಹ ಆರೋಪಿಗಳ ಪತ್ರಗಳನ್ನೂ ಜೈಲಿನ ಅಧೀಕ್ಷರು ತಡವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಇದು ದುರುದ್ದೇಶ ಮತ್ತು ಅಮಾನವೀಯ ಕೃತ್ಯ’ ಎಂದೂ ರಮಾ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ ಮತ್ತು ಎನ್‌.ಜೆ. ಜಾಮ್‌ದಾರ್ ಅವರನ್ನೊಳಗೊಂಡ ನ್ಯಾಯಪೀಠವು ಶನಿವಾರ ಮೊದಲು ಬಾರಿಗೆ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

‘ಮಾರ್ಚ್ ನಂತರ ಆನಂದ್ ಅವರಿಂದ ರಮಾ ಮತ್ತು ವಕೀಲರು ಯಾವ ಪತ್ರಗಳನ್ನೂ ಸ್ವೀಕರಿಸಿಲ್ಲ’ ಸ್ವೀಕರಿಸಿಲ್ಲ ಎಂದು ಆನಂದ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.

‘ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳು, ಸಹ ಆರೋಪಿಗಳು ತಮ್ಮ ಕುಟುಂಬ ಮತ್ತು ವಕೀಲರೊಂದಿಗೆ ಪರಸ್ಪರ ಪತ್ರ ವಿನಿಮಯ ಹಾಗೂ ಸಂವಹನಕ್ಕೆ ಅವಕಾಶ ನೀಡಬೇಕು. ಈ ಸಂಬಂಧ ಜೈಲಿನ ಅಧೀಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದೂ  ವಕೀಲರು ಕೋರಿದರು.

ಎನ್ಐಎ ಪರ ಹಾಜರಾಗಿದ್ದ  ವಕೀಲ ಸಂದೇಶ್ ಪಾಟೀಲ್ ಅವರು, ಅರ್ಜಿಯ ಪ್ರತಿಯನ್ನು ಇನ್ನೂ ದೊರೆತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಂತರ ಹೈಕೋರ್ಟ್, ಆನಂದ್ ಪರ ವಕೀಲ ಸತ್ಯನಾರಾಯಣ್ ಅವರಿಗೆ ಎನ್ಐಎ ಮತ್ತು ರಾಜ್ಯಕ್ಕೆ ಪ್ರತಿಗಳನ್ನು ಒದಗಿಸುವಂತೆ ನಿರ್ದೇಶನ ನೀಡಿತು. ಜುಲೈ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು