ಶನಿವಾರ, ಏಪ್ರಿಲ್ 10, 2021
32 °C
ಅಸ್ಸಾಂನ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಸಿಕ್ಕ ಮತಯಂತ್ರ: ಆಯೋಗದ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌

‘ಮತಯಂತ್ರ ವಂಚನೆ: ಜನತಂತ್ರಕ್ಕೆ ಮಾರಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಸಿಕ್ಕಿದ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಶುಕ್ರವಾರ ಪ್ರಶ್ನಿಸಿದೆ. ಆಯೋಗವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಇಂತಹ ಕೃತ್ಯಗಳಲ್ಲಿ ಶಾಮೀಲಾಗುವುದನ್ನು ಮುಂದುವರಿಸಿದರೆ ಪ್ರಜಾಪ್ರಭುತ್ವಕ್ಕೆ ಮಾರಣಾಂತಿಕ ಹೊಡೆತ ಬೀಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಪತ್ತೆಯಾದ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆಯೋಗದ ಕಾರು ಹಾಳಾಗಿದೆ. ಬಿಜೆಪಿಯ ಉದ್ದೇಶ ಕೆಟ್ಟದ್ದು ಮತ್ತು ಪ್ರಜಾಪ್ರಭುತ್ವದ ಸ್ಥಿತಿ ಶೋಚನೀಯ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ. 

ಅಸ್ಸಾಂನಲ್ಲಿ ಭಾರಿ ಸೋಲು ಕಾದಿದೆ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿಯೇ ಆ ಪಕ್ಷವು ಹೇಳಲಾಗದಷ್ಟು ದಿಗಿಲುಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. 

‘ಹತಾಶೆಯ ಕೊನೆಯ ಕ್ರಮವೇ ಮತಯಂತ್ರ ಕಳ್ಳತನ. ಮತಯಂತ್ರವು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಅವರ ಕಾರಿನಲ್ಲಿ ಹೇಗೆ ಬಂತು? ಅಸ್ಸಾಂನ ದಿಫು ಬಳಿಯ ಹಾತಿಪುರ ಮತಗಟ್ಟೆಯ ಬಳಿ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಮತಯಂತ್ರ ಇರಿಸಿದ್ದು ಏಕೆ? ಆಯೋಗವು ಉತ್ತರಿಸುತ್ತದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. 

ಭದ್ರತಾ ಸಿಬ್ಬಂದಿ ಇಲ್ಲದೆಯೇ ಮತಯಂತ್ರಗಳನ್ನು ಒಯ್ದದ್ದು ಏಕೆ? ಕಾಲೈಗಾಂವ್‌ ಮತಗಟ್ಟೆಯಿಂದ ಮತಯಂತ್ರ ಮಾಯವಾಗಿತ್ತು ಎಂದು ಮತದಾರರು ದೂರಿದ್ದು ನಿಜವೇ? ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಳ್ಳಲಾಗಿದೆ? ಮತಯಂತ್ರಗಳನ್ನು ಇರಿಸಿದ ದಿಬ್ರುಗಡದ ಕೊಠಡಿಯಲ್ಲಿ ಅನುಮಾನಾಸ್ಪದ ಅಧಿಕಾರಿಯೊಬ್ಬರು ಇದ್ದದ್ದು ಹೌದೇ? ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ... ಹೀಗೆ ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ. 

139 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಕೇಳಿದ್ದಾರೆ.

ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಚುನಾವಣೆಗಳು ಮತ್ತು ಮತಯಂತ್ರ ಸುರಕ್ಷತೆಯ ಬಗ್ಗೆ ಆಯೋಗವು ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ ಎಂದು ಕಾಂಗ್ರೆಸ್‌ ಮುಖಂಡ ರಾಜೀವ್ ಶುಕ್ಲಾ ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು