ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬರಿ ಮಸೀದಿಯಂತೆ ಜ್ಞಾನವ್ಯಾಪಿ ಮಸೀದಿ ಕೆಡವಲಾಗುವುದು: ಸಂಗೀತ್ ಸೋಮ್

Last Updated 10 ಮೇ 2022, 15:30 IST
ಅಕ್ಷರ ಗಾತ್ರ

ಲಖನೌ: ‘ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಬಾಬರಿ ಮಸೀದಿಯಂತೆ ಕೆಡವಲಾಗುವುದು’ ಎಂದು ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ನೀಡಿರುವ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದೆ.

ಮೀರತ್‌ನಲ್ಲಿ ಸೋಮವಾರ ಸಮಾರಂಭವೊಂದರಲ್ಲಿ ಮಾತನಾಡಿದ ಸಂಗೀತ್ ಸೋಮ್, ‘1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈಗ ಜ್ಞಾನವ್ಯಾಪಿ ಮಸೀದಿಯ ಸರದಿ. 2022ರಲ್ಲಿ ನಾವು ಈ ಮಸೀದಿಯನ್ನು ಕೆಡವುತ್ತೇವೆ’ ಎಂದು ಹೇಳಿದ್ದಾರೆ.

‘ಮುಸ್ಲಿಂ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನು ಹಿಂಪಡೆಯುವ ಸಮಯ ಈಗ ಬಂದಿದೆ. ಬಾಬರಿ ಮಸೀದಿ ಕೆಡವಿದ ದಿನವೇ ಮುಸ್ಲಿಮರಿಗೆ ಇದು ಗೊತ್ತಿರಬೇಕಿತ್ತು. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕಿತ್ತು. ನಾವು ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ. ಎಲ್ಲವನ್ನೂ ಕೆಡವುತ್ತೇವೆ’ ಎಂದೂ ಅವರು ಹೇಳಿದ್ದಾರೆ.

‘ರಾಮಲಾಲಾ (ಶ್ರೀರಾಮನ ವಿಗ್ರಹ) ಹಲವು ವರ್ಷಗಳಿಂದ ಟಾರ್ಪಾಲಿನ್‌ನಲ್ಲಿ ಉಳಿಯಬೇಕಾಯಿತು. ಆದರೆ, ಈಗ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಇಂದು ಬಾಬರಿ ಮಸೀದಿಯ ಒಂದು ಇಟ್ಟಿಗೆಯೂ ಸಿಗುವುದಿಲ್ಲ. ಜ್ಞಾನವಾಪಿ ಮಸೀದಿಗೂ ಇದೇ ಸ್ಥಿತಿ ಆಗಲಿದೆ. ಆ ಮಸೀದಿಯೊಳಗೆ ದೇವಾಲಯದ ಪುರಾವೆಗಳಿವೆ ಎಂಬುದನ್ನು ತಿಳಿದಿದ್ದರಿಂದಲೇ ಮುಸ್ಲಿಮರು ಉದ್ದೇಶಪೂರ್ವಕವಾಗಿ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದ ಸರ್ವೇಕ್ಷಣೆಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.

2013ರಲ್ಲಿ ಮುಜಾಫ್ಫರ್‌ನಗರದಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಸಂಗೀತ್ ಆರೋಪಿ ಅಗಿದ್ದರು. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅತುಲ್ ಪ್ರಧಾನ ವಿರುದ್ಧ ಸ್ಪರ್ಧಿಸಿದ್ದ ಸಂಗೀತ್ ಸೋಮ್ ಸೋಲುಂಡಿದ್ದರು.

ಈ ಹಿಂದೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ‘ಕಾಶಿಯ ವಿಶ್ವನಾಥ ದೇಗುಲ ಮತ್ತು ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ವಿಮೋಚನೆಗೊಳಿಸಿ’ ಎಂದು ಕರೆ ನೀಡಿತ್ತು.

‘ರಾಮ ಮಂದಿರಕ್ಕಾಗಿ ಹೋರಾಟ ಕೊನೆಗೊಂಡಿದೆ. ಈಗ ಕಾಶಿ ಮತ್ತು ಮಥುರಾದ ಸರದಿ. ಈ ಎರಡೂ ದೇವಾಲಯಗಳನ್ನೂ ಮುಕ್ತಗೊಳಿಸಬೇಕು’ ಎಂದು ದೇಶದ ದಾರ್ಶನಿಕರ ಉನ್ನತ ಸಂಸ್ಥೆ ಅಖಿಲ ಭಾರತ ಅಖಾರ ಪರಿಷತ್ತು (ಎಐಎಪಿ) ಕೂಡಾ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT