ಭಾನುವಾರ, ಆಗಸ್ಟ್ 14, 2022
25 °C

ಅಂಬಾನಿ ಮನೆಯ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಸಮೀಪ ಸ್ಫೋಟಕಗಳಿದ್ದ ವಾಹನ ಪತ್ತೆ ಮತ್ತು ಮನ್‌ಸುಖ್‌ ಹಿರೇನ್‌ ಕೊಲೆ ಪ್ರಕರಣದ ಆರೋಪದಡಿ ಎನ್ಐಎ ಅಧಿಕಾರಿಗಳು ಗುರುವಾರ ಮಾಜಿ ಪೊಲೀಸ್ ಅಧಿಕಾರಿ, ‘ಎನ್‌ಕೌಂಟರ್ ಪರಿಣತ’ರಾಗಿದ್ದ ಪ್ರದೀಪ್‌ ಶರ್ಮಾ ಅವರನ್ನು ಬಂಧಿಸಿದ್ದಾರೆ.

ಬುಧವಾರ ರಾತ್ರಿ ಲೋನವಾಲಾದಲ್ಲಿ ಶರ್ಮಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎನ್‌ಐಎ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು. ಜೆ.ಬಿ.ನಗರದಲ್ಲಿ ಶರ್ಮಾ ನಿವಾಸದ ಮೇಲೂ ದಾಳಿ ನಡೆಸಿದ್ದರು.

ಗುರುವಾರ ಅವರನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕರಣದಲ್ಲಿ ಅವರ ಪಾತ್ರವಿದೆ ಎಂಬ ಗುಮಾನಿಯು ವ್ಯಕ್ತವಾದ ನಂತರ ಎರಡು ತಿಂಗಳ ಹಿಂದೆಯೂ ಶರ್ಮಾ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಎನ್‌ಐಎ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಂಬಂಧ ಒಟ್ಟು ಎಂಟು ಜನರನ್ನು ಬಂಧಿಸಿದ್ದು, ಇವರಲ್ಲಿ ಐವರು ಪೊಲೀಸ್‌ ಇಲಾಖೆಯವರೇ ಆಗಿದ್ದಾರೆ. ಈಗಾಗಲೇ ಪೊಲೀಸ್‌ ಅಧಿಕಾರಿಗಳಾದ ಸಚಿನ್ ವಾಜೆ, ರಿಯಾಜುದ್ದೀನ್ ಕಾಜಿ, ಸುನಿಲ್‌ ಮಾನೆ, ಪೊಲೀಸ್ ಕಾನ್‌ಸ್ಟೆಬಲ್‌ ವಿನಾಯಕ ಶಿಂಧೆ ಅವರನ್ನು ಬಂಧಿಸಲಾಗಿತ್ತು.

ಉಳಿದಂತೆ, ಸ್ಪೋಟಕಗಳಿದ್ದ ವಾಹನವನ್ನು ಅಂಬಾನಿ ನಿವಾಸದ ಸಮೀಪ ಫೆ. 25ರಂದು ನಿಲ್ಲಿಸಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಲಾಡ್‌ ನಿವಾಸಿಗಳಾದ ಸಂತೋಷ್‌ ಶೆಲರ್‌ ಮತ್ತು ಆನಂದ್‌ ಜಾಧವ್‌ ಅವರನ್ನು ಬಂಧಿಸಲಾಗಿತ್ತು.

ಈ ವಾಹನದ ಮಾಲೀಕತ್ವವನ್ನು ಹೊಂದಿದ್ದರು ಎನ್ನಲಾದ ಪುಣೆಯ ಉದ್ಯಮಿ ಮನ್‌ಸುಖ್‌ ಹಿರೇನ್ ಅವರು ಶಂಕಾಸ್ಪದ ರೀತಿಯಲ್ಲಿ ಮಾರ್ಚ್‌ 5ರಂದು ಸತ್ತಿದ್ದು, ಚರಂಡಿಯೊಂದರಲ್ಲಿ ಅವರ ಶವ ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು