ಸೋಮವಾರ, ಜುಲೈ 4, 2022
22 °C
ಮತಗಟ್ಟೆ ಸಮೀಕ್ಷೆಗಳ ಸರಾಸರಿ: ಕೇರಳದಲ್ಲಿ ಎಲ್‌ಡಿಎಫ್‌, ಅಸ್ಸಾಂನಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ

ವಿಧಾನಸಭೆ ಚುನಾವಣೆ 2021: ಬಂಗಾಳಕ್ಕೆ ದೀದಿ, ತಮಿಳುನಾಡಿಗೆ ಸ್ಟಾಲಿನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಮತದಾನ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಅದರ ಬೆನ್ನಿಗೇ ವಿವಿಧ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಬಹಿರಂಗವಾಗಿವೆ. ಅತ್ಯಂತ ಜಿದ್ದಿನಿಂದ ಚುನಾವಣಾ ಪ್ರಚಾರ ನಡೆದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (ದೀದಿ) ನೇತೃತ್ವದ ಟಿಎಂಸಿ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂಬುದು ಸಮೀಕ್ಷೆಗಳ ಸರಾಸರಿಯಿಂದ ದೊರೆಯುವ ಭವಿಷ್ಯ. ಆದರೆ, ರಿಪಬ್ಲಿಕ್‌ ಟಿ.ವಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಅಸ್ಸಾಂನಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯಲಿದೆ ಎಂಬುದು ಸಮೀಕ್ಷೆಗಳ ಸರಾಸರಿಯ ಅಂದಾಜು. ದಕ್ಷಿಣಕ್ಕೆ ಬಂದರೆ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಖಚಿತ ಎಂಬುದು ಸರಾಸರಿ ಸಮೀಕ್ಷೆಗಳ ಭವಿಷ್ಯ. ಕೇರಳದಲ್ಲಿ ಎಲ್‌ಡಿಎಫ್‌–ಯುಡಿಎಫ್‌ ಪರ್ಯಾಯ ಆಡಳಿತದ ಹಲವು ದಶಕಗಳ ಪ್ರವೃತ್ತಿ ಬದಲಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಎಲ್‌ಡಿಎಫ್‌ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಭಾರಿ ಜಯ ಲಭಿಸಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ. ಪುದುಚೇರಿಯಲ್ಲಿ ಎನ್‌ಆರ್‌ಸಿ ನೇತೃತ್ವದ ಮೈತ್ರಿಕೂಟ ಗೆಲ್ಲಲಿದೆ ಎಂದು ಭವಿಷ್ಯ ಹೇಳಲಾಗಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಕೂಡ ಇದೆ. 

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ 156 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಬಿಜೆಪಿ 121 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಎಡರಂಗ–ಕಾಂಗ್ರೆಸ್‌–ಇಂಡಿಯನ್‌ ಸೆಕ್ಯುಲರ್ ಫ್ರಂಟ್‌ ಮೈತ್ರಿಕೂಟವು 16 ಕ್ಷೇತ್ರಗಳನ್ನಷ್ಟೇ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಸರಳ ಬಹುಮತಕ್ಕೆ 148 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಹಾಗಾಗಿ, ಮಮತಾ ಬ್ಯಾನರ್ಜಿ ಅವರಿಗೆ ಸರಳ ಬಹುಮತಕ್ಕೆ ತೊಡಕಾಗದು ಎಂಬುದು ಸಮೀಕ್ಷೆಗಳ ಭವಿಷ್ಯವಾಗಿದೆ. 

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 76 ಕ್ಷೇತ್ರಗಳಲ್ಲಿ ಗೆಲುವು ದೊರೆತರೆ, ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ 49 ಕ್ಷೇತ್ರಗಳಲ್ಲಿ ಗೆಲುವು ದೊರೆಯಲಿದೆ ಎಂದು ಈ ಸಮೀಕ್ಷೆಗಳು ಅಂದಾಜಿಸಿವೆ. ಇಲ್ಲಿ ಸರಳ ಬಹುಮತಕ್ಕೆ 64 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. 

ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ 87 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು.

ಎಲ್‌ಡಿಎಫ್‌ಗೆ ಕಳೆದ ಬಾರಿಯಷ್ಟು (91) ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯವಾದರೂ ಸತತ ಎರಡನೇ ಅವಧಿಗೆ ಅಧಿಕಾರ ಉಳಿಯಲಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಯುಡಿಎಫ್‌ಗೆ ಹೆಚ್ಚಿನ ಆರು ಕ್ಷೇತ್ರಗಳಲ್ಲಿ ಗೆಲುವುದು ದೊರೆಯಬಹುದು. ಆದರೆ, ಅಧಿಕಾರದ ಹತ್ತಿರಕ್ಕೆ ಬರಲಾಗದು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 20 ಕ್ಷೇತ್ರಗಳ ಪೈಕಿ 19ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಅದಲ್ಲದೆ, ಕೆಲವು ದಶಕಗಳಿಂದ ಇಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪರ್ಯಾಯವಾಗಿ ಅಧಿಕಾರಕ್ಕೆ ಬರುವುದು ಒಂದು ಪದ್ಧತಿಯೇ ಆಗಿಬಿಟ್ಟಿದೆ. ಈ ಎರಡು ಕಾರಣಗಳಿಂದಾಗಿ ಯುಡಿಎಫ್‌ಗೆ ಇಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇತ್ತು. ಅದು ಸಾಧ್ಯವಾಗದು ಎಂಬ ಸುಳಿವನ್ನು ಸಮೀಕ್ಷೆಗಳ ಸರಾಸರಿಯು ನೀಡುತ್ತಿದೆ.

ಇದನ್ನೂ ಓದಿ: 

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಜಯಭೇರಿ ಬಾರಿಸಲಿದೆ ಎಂಬುದು ಸಮೀಕ್ಷೆಗಳ ಅಂದಾಜು. 234 ಕ್ಷೇತ್ರಗಳ ಪೈಕಿ 171ರಲ್ಲಿ ಈ ಮೈತ್ರಿಕೂಟ ಗೆಲ್ಲಲಿದೆ. ಈಗ ಅಧಿಕಾರದಲ್ಲಿ ಇರುವ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 59 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಕೂಡ ಇದೆ.

‘ಕೇರಳದಲ್ಲಿ ಬಿಜೆಪಿಗಿಲ್ಲ ಮುನ್ನಡೆ’
ಕೇರಳದಲ್ಲಿ ಪ್ರಮುಖ ಪಕ್ಷವಾಗಿ ಗುರುತಿಸಿಕೊಳ್ಳಬೇಕು ಎಂದು ಬಿಜೆಪಿ ಭಾರಿ ಪ್ರಯತ್ನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿ ಹಲವರು ಇಲ್ಲಿ ಹಲವು ಸುತ್ತು ಪ್ರಚಾರ ನಡೆಸಿದ್ದರು. ಮೆಟ್ರೊಮ್ಯಾನ್‌ ಎಂದೇ ಖ್ಯಾತರಾಗಿರುವ ತಂತ್ರಜ್ಞ ಇ. ಶ್ರೀಧರನ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕೆ ಇಳಿಸಿದೆ. ರಾಜ್ಯ ಸಭಾ ಸದಸ್ಯ ಮತ್ತು ಸಿನಿಮಾ ನಟ ಸುರೇಶ್‌ ಗೋಪಿ ಅವರನ್ನೂ ಅಭ್ಯರ್ಥಿಯನ್ನಾಗಿಸಿದೆ. ಆದರೆ, ಈ ಯಾವುದೂ ಫಲ ಕೊಡದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ಸಮೀಕ್ಷೆಗಳ ಪ್ರಕಾರ ಇಲ್ಲಿ ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದೊರೆಯಲಿದೆ. ಕಳೆದ ಚುನಾವಣೆಯಲ್ಲಿ ತಿರುವನಂತಪುರ ದ ನೇಮಮ್‌ ಕ್ಷೇತ್ರದಲ್ಲಿ ಗೆಲ್ಲುವುದು ಮಾತ್ರ ಬಿಜೆಪಿಗೆ ಸಾಧ್ಯವಾಗಿತ್ತು.

‘ಕಮಲ್‌ಹಾಸನ್‌ ಸದ್ದಿಲ್ಲ’
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ನಟ ಕಮಲ್‌ಹಾಸನ್‌ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷವು ಚುನಾವಣೆಯಲ್ಲಿ ಯಾವುದೇ ಪರಿಣಾಮ ಉಂಟು ಮಾಡುವಲ್ಲಿ ವಿಫಲವಾಗಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

ಸಮೀಕ್ಷೆಗಳಲ್ಲಿ ಅವರ ಪಕ್ಷದ ಪ್ರಸ್ತಾಪವೇ ಇಲ್ಲ. ‘ಇತರರು’ ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಹೇಳಲಾಗಿದೆ. ಕಮಲ್‌ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ, ವಿ.ಕೆ. ಶಶಿಕಲಾ ಅವರ ಸೋದರಳಿಯ ಟಿ.ಟಿ.ವಿ. ದಿನಕರನ್‌ ನೇತೃತ್ವದ ಪಕ್ಷವು ನಾಲ್ಕು ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು