ಭಾನುವಾರ, ನವೆಂಬರ್ 1, 2020
19 °C

ಸಮನ್ಸ್‌ನಿಂದ ಫೇಸ್‌ಬುಕ್‌ ಜಾರಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್‌ಗೆ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಧಾನಸಭೆ ಸಮಿತಿ ನೀಡಿರುವ ಸಮನ್ಸ್‌ಗೆ ಉತ್ತರ ನೀಡಲು ನಿರಾಕರಿಸುವಂತಿಲ್ಲ ಮತ್ತು ಸಮಿತಿಯ ಮುಂದೆ ಯಾರು ಹಾಜರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಫೇಸ್‌ಬುಕ್‌ಗೆ ಇಲ್ಲ ಎಂದು ದೆಹಲಿ ವಿಧಾನಸಭೆ ಕಾರ್ಯದರ್ಶಿ ಸದಾನಂದ ಶಾ ಸುಪ್ರೀಂ ಕೋರ್ಟ್‌ಗೆ ವಿವರಿಸಿದ್ದಾರೆ. 

‘ಸಾರ್ವಜನಿಕರ ಮೇಲೆ ಪರಿಣಾಮ ಬೀರುವ ಮಹತ್ವದ ವಿಷಯಗಳ ಕುರಿತು ಪರಿಶೀಲನೆ ನಡೆಸುವ ಹಕ್ಕು ಶಾಸಕಾಂಗಕ್ಕೆ ಇದೆ. ಸಮಿತಿಯ ಮುಂದೆ ಸಂಬಂಧಪಟ್ಟವರನ್ನು ಹಾಜರುಪಡಿಸುವ ಸ್ವಾತಂತ್ರ್ಯ ವಿಧಾನಸಭೆಗೆ ಇದೆ’ ಎಂದು ಹೇಳಿದ್ದಾರೆ. 

‘ಸಂಸತ್‌ ಸದಸ್ಯರಿಗಿರುವ ಸ್ವಾತಂತ್ರ್ಯ ಮತ್ತು ಅಧಿಕಾರಗಳು ದೆಹಲಿ ವಿಧಾನಸಭಾ ಸದಸ್ಯರಿಗೂ ಇವೆ. ಶಾಸಕ ರಾಘವ್‌ ಚಡ್ಡಾ ಮುಖ್ಯಸ್ಥರಾಗಿರುವ ಶಾಂತಿ ಮತ್ತು ಸೌಹಾರ್ದ ಸಮಿತಿಯು, ದೆಹಲಿ ಗಲಭೆಯಲ್ಲಿ ಫೇಸ್‌ಬುಕ್‌ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದೆ. ಹೀಗಾಗಿ ಸಮನ್ಸ್ ಜಾರಿ ಮಾಡಲಾಗಿದೆ. ಇದಕ್ಕೆ ಅವರು ಉತ್ತರಿಸಬೇಕು ಮತ್ತು ಹಾಜರಾಗಬೇಕು’ ಎಂದು ವಿವರಿಸಿದ್ದಾರೆ.  

ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಸಾಮಾಜಿಕ ಜಾಲತಾಣದ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ಶಾಂತಿ ಮತ್ತು ಸೌಹಾರ್ದ ಸಮಿತಿಯು ಫೇಸ್‌ಬುಕ್‌ಗೆ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಫೇಸ್‌ಬುಕ್‌ ಇಂಡಿಯಾ ಉಪಾಧ್ಯಕ್ಷ ಅಜಿತ್‌ ಮೋಹನ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಫೇಸ್‌ಬುಕ್‌ಗೆ ಸಮನ್ಸ್‌ ನೀಡಿರುವ ಬಗ್ಗೆ ಉತ್ತರಿಸುವಂತೆ ಕೋರ್ಟ್‌ ಸೆ.23ರಂದು ದೆಹಲಿ ವಿಧಾನಸಭೆಯ ಕಾರ್ಯದರ್ಶಿಗೆ ನೋಟಿಸ್‌ ನೀಡಿತ್ತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು