ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮಾದಲ್ಲಿದ್ದಾರೆ ಎಂದು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡ ಕಾನ್ಪುರ ಕುಟುಂಬ

Last Updated 24 ಸೆಪ್ಟೆಂಬರ್ 2022, 5:44 IST
ಅಕ್ಷರ ಗಾತ್ರ

ಕಾನ್ಪುರ: ವ್ಯಕ್ತಿಯೊಬ್ಬರು ಮೃತಪಟ್ಟು 18 ತಿಂಗಳು ಕಳೆದರೂ, ಅವರು ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬದವರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಪ್ರಕರಣ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ವಿಮಲೇಶ್‌ ದೀಕ್ಷಿತ್‌ ಮೃತಪಟ್ಟಿದ್ದವರು.

ದೀಕ್ಷಿತ್‌ ಅವರ ಪತ್ನಿ ಶವದ ಮೇಲೆ ನಿತ್ಯ 'ಗಂಗಾಜಲ' ಪ್ರೋಕ್ಷಣೆ ಮಾಡುತ್ತಿದ್ದರು. ಮಾನಸಿಕ ಸ್ಥಿರತೆ ಕಳೆದುಕೊಂಡಂತೆ ಕಂಡುಬಂದಿರುವ ಅವರು ತಮ್ಮ ಪತಿ ಕೋಮಾದಿಂದ ಹೊರಬರಲು'ಗಂಗಾಜಲ' ನೆರವಾಗಬಹುದು ಎಂದು ಭಾವಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಕ್ಷಿತ್‌ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ ಎಂದುಖಾಸಗಿ ಆಸ್ಪತ್ರೆಯು 2021ರ ಏಪ್ರಿಲ್‌ 21ರಂದೇ ಮರಣ ಪ್ರಮಾಣಪತ್ರ ನೀಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೀಕ್ಷಿತ್‌ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬ ಅಂತಿಮ ಸಂಸ್ಕಾರವನ್ನೂ ನೆರವೇರಿಸಿಲ್ಲ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಒ) ಡಾ. ಅಲೋಕ್‌ ರಂಜನ್‌ ತಿಳಿಸಿದ್ದಾರೆ.

ದೀಕ್ಷಿತ್‌ ಕುಟುಂಬದ ಪಿಂಚಣಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿ, ತನಿಖೆ ನಡೆಸುವಂತೆ ಕೋರಿದ್ದರು. ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಅಧಿಕಾರಿಗಳ ತಂಡ ರಾವತ್‌ಪುರ ಪ್ರದೇಶದಲ್ಲಿರುವ ದೀಕ್ಷಿತ್‌ ಅವರ ಮನೆಗೆ ಭೇಟಿ ನೀಡಿದಾಗ ವಿಚಾರ ಗೊತ್ತಾಗಿದೆ. ಈ ವೇಳೆ ಕುಟುಂಬದವರು ದೀಕ್ಷಿತ್‌ ಜೀವಂತವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ಒತ್ತಾಯಪೂರ್ವಕವಾಗಿ ತಿಳಿಸಿದ್ದರು. ಆದಾಗ್ಯೂ, ಕುಟುಂಬದವರ ಮನವೊಲಿಸಿದಅಧಿಕಾರಿಗಳು ಶವವನ್ನು ಲಾಲಾ ಲಜಪತ್‌ ರಾಜ್‌ (ಎಲ್‌ಎಲ್‌ಆರ್‌) ಆಸ್ಪತ್ರೆಗೆ ತಂದು ವೈದ್ಯಕೀಯ ತಪಾಸಣೆ ನಡೆಸಿದರು. ಬಳಿಕ, ದೀಕ್ಷಿತ್‌ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು ಎಂದುರಂಜನ್‌ ವಿವರಿಸಿದ್ದಾರೆ.

ಈ ಕುರಿತು ತ್ರಿ–ಸದಸ್ಯ ತಂಡವನ್ನು ರಚಿಸಲಾಗಿದೆ. ಕೂಲಂಕಷವಾಗಿ ಪರಿಶೀಲಿಸಿಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಕುಟುಂಬದವರು ದೀಕ್ಷಿತ್‌ ಕೋಮಾದಲ್ಲಿದ್ದಾರೆ ಎಂದು ನೆರೆಹೊರೆಯವರಿಗೂ ಹೇಳಿದ್ದರು.ದೀಕ್ಷಿತ್‌ ಅವರ ಪತ್ನಿ ಮಾನಸಿಕವಾಗಿ ಸ್ಥಿರತೆ ಕಳೆದುಕೊಂಡಿರುವಂತೆ ಕಂಡುಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೀಕ್ಷಿತ್‌ ಕುಟುಂಬ ಸದಸ್ಯರು ಆಮ್ಲಜನಕ ಸಿಲಿಂಡರ್‌ಗಳನ್ನುಆಗಾಗ್ಗೆ ಮನೆಗೆ ಕೊಂಡೊಯ್ಯುತ್ತಿದ್ದದ್ದನ್ನು ನೋಡಿದ್ದಾಗಿ ಅಕ್ಕಪಕ್ಕದವರು ಹೇಳಿಕೆ ನಿಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT