ಬುಧವಾರ, ಆಗಸ್ಟ್ 17, 2022
28 °C
ಐವರು ಸದಸ್ಯರ ಸಮಿತಿ ರಚನೆ l ಸರ್ಕಾರದ ಪ್ರಸ್ತಾವ ತಿರಸ್ಕರಿಸಿದ ರೈತ ನಾಯಕರು

ದೆಹಲಿಯಲ್ಲಿ ರೈತರ ಪ್ರತಿಭಟನೆ: ಮೊದಲ ಮಾತುಕತೆ ವಿಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಕೇಂದ್ರದ ಮೂವರು ಸಚಿವರು ಮಂಗಳವಾರ ನಡೆಸಿದ ಮಾತುಕತೆ ಯಾವುದೇ ಫಲ ನೀಡಿಲ್ಲ. ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತರು ಮುಂದಿಟ್ಟಿರುವ ಆಗ್ರಹವನ್ನು ಸರ್ಕಾರ ಒಪ್ಪಿಲ್ಲ.

ರೈತರು ಎತ್ತಿರುವ ವಿಚಾರಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವ ಸರ್ಕಾರದ ಪ್ರಸ್ತಾವವನ್ನು ಮಾತುಕತೆಯಲ್ಲಿ ಭಾಗವಹಿಸಿದ್ದ 35 ರೈತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ಮೊದಲ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲದ ಕಾರಣ ಗುರುವಾರ ಮತ್ತೊಂದು ಮಾತುಕತೆಗೆ ಸರ್ಕಾರ ಆಹ್ವಾನ ನೀಡಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.  ರೈತರು ಆರು ದಿನಗಳಿಂದ ದೆಹಲಿ ಪ್ರವೇಶ ಮಾರ್ಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆದ ಮಾತುಕತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌, ರೈಲ್ವೆ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌, ವಾಣಿಜ್ಯ ಖಾತೆಯ ರಾಜ್ಯ ಸಚಿವ ಸೋಮ್‌ ಪ್ರಕಾಶ್‌ ಭಾಗವಹಿಸಿದ್ದರು. ಸುಮಾರು ಮೂರು ತಾಸು ಮಾತುಕತೆ ನಡೆಯಿತು. 

ಕೇಂದ್ರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದನ್ನು ರೈತ ಸಂಘಟನೆಗಳ ಪ್ರತಿನಿಧಿಗಳು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಕಾಯ್ದೆಗಳಿಂದಾಗಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗಲಿದೆ ಮತ್ತು ರೈತರು ವ್ಯಾಪಾರಿಗಳ ನಿಯಂತ್ರಣಕ್ಕೆ ಒಳಪಡಬೇಕಾಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ.‌

ಆದರೆ, ಹೊಸ ಕಾಯ್ದೆಗಳಿಂದ ರೈತರಿಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ, ಹಾಗಾಗಿ, ಕಾಯ್ದೆಗಳ ರದ್ದತಿ ಇಲ್ಲ ಎಂಬುದು ಸರ್ಕಾರದ ನಿಲುವಾಗಿದೆ. 

ದೊಡ್ಡ ಗುಂಪಿನ ಜತೆಗೆ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರುವುದು ಕಷ್ಟದ ಕೆಲಸ. ಹಾಗಾಗಿ, ರೈತ ಸಂಘಟನೆಗಳ ಪ್ರತಿನಿಧಿಗಳ ಸಣ್ಣ ಸಮಿತಿ ರಚಿಸುವಂತೆ ಮಾತುಕತೆಯಲ್ಲಿ ಭಾಗಿಯಾಗಿದ್ದ ಸಚಿವರು ಸಲಹೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಆದರೆ, ಇದು ರೈತರ ಒಗ್ಗಟ್ಟು ಮುರಿಯುವ ಯತ್ನ ಎಂಬ ಭೀತಿ ರೈತರಲ್ಲಿ ಇದೆ. ಹಾಗಾಗಿ, ಮಾತುಕತೆಗಾಗಿ ಸಣ್ಣ ಸಮಿತಿ ರಚಿಸುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ರೈತ ಮುಖಂಡರು ಬಂದಿದ್ದಾರೆ. 

ಪೂರ್ವ ದೆಹಲಿಯ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರ ಸಂಘಟನೆ ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಟಿಕಾಯತ್‌ ಬಣದ ಪ್ರತಿನಿಧಿಗಳ ಜತೆಗೆ ಕೃಷಿ ಸಚಿವಾಲಯದ ನಿಯೋಗವು ಮತ್ತೊಂದು ಮಾತುಕತೆ ನಡೆಸಿದೆ. 

ಪ್ರಶಸ್ತಿ ವಾಪಸ್‌

ಹಲವು ಕ್ರೀಡಾಪಟುಗಳು ತಮಗೆ ದೊರೆತ ಪ್ರಶಸ್ತಿ ಹಿಂದಿರುಗಿಸುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್‌ ಸಿಂಗ್‌, ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್‌ಬಾಲ್‌ ಆಟಗಾರ ಸಜ್ಜನ್‌ ಸಿಂಗ್ ಚೀಮಾ, ಅರ್ಜುನ ಪ್ರಶಸ್ತಿ ಪಡೆದ ಹಾಕಿ ಆಟಗಾರ್ತಿ ರಾಜ್‌ಬೀರ್‌ ಕೌರ್‌ ಅವರು ‍ಪ್ರಶಸ್ತಿ ವಾಪಸ್‌ ಕೊಡುವುದಾಗಿ ಹೇಳಿದ್ದಾರೆ. ಅವರೆಲ್ಲರೂ ಶನಿವಾರ ದೆಹಲಿಗೆ ಹೋಗಿ ತಮ್ಮ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದ ಹೊರಗೆ ಇರಿಸಲು ತೀರ್ಮಾನಿಸಿದ್ದಾರೆ.

ಬೆಂಬಲ ಹೆಚ್ಚಳ

ಪ‍ಕ್ಷೇತರ ಶಾಸಕ ಸೋಂಬೀರ್‌ ಸಂಗ್ವಾನ್‌ ಅವರು ಹರಿಯಾಣದ ಬಿಜೆಪಿ–ಜೆಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದಾರೆ

ಹರಿಯಾಣ ಜಾನುವಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ಸಂಗ್ವಾನ್‌ ರಾಜೀನಾಮೆ ನೀಡಿದ್ದಾರೆ

ಪ್ರತಿಭಟನೆಯಲ್ಲಿ ಸುಮಾರು 15 ಸಾವಿರ ಮಹಿಳೆಯರೂ ಭಾಗಿಯಾಗಿದ್ದಾರೆ; ಇವರಲ್ಲಿ ಹಿರಿಯ ನಾಗರಿಕರೂ ಇದ್ದಾರೆ

ದೆಹಲಿಯ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ; ದಿನಕಳೆದಂತೆ ಪ್ರತಿಭಟನೆಯ ತೀವ್ರತೆ ಹೆಚ್ಚಲಿದೆ ಎಂದು ರೈತರು ಹೇಳಿದ್ದಾರೆ

ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ ಎಂಬ ಲಿಖಿತ ಭರವಸೆಯನ್ನು ರೈತರಿಗೆ ನೀಡಬೇಕು ಎಂದು ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಜೆಪಿ ಒತ್ತಾಯಿಸಿದೆ

ಕೆನಡಾ ಪ್ರಧಾನಿ ಬೆಂಬಲಕ್ಕೆ ಕೇಂದ್ರದ ಆಕ್ಷೇಪ

ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರೂಡೊ, ತಮ್ಮ ದೇಶವು ಶಾಂತಿಯುತ ಪ್ರತಿಭಟನೆಗಳ ಪರವಾಗಿ ಸದಾ ಇರುತ್ತದೆ ಎಂದಿದ್ದಾರೆ. ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅಂತರರಾಷ್ಟ್ರೀಯ ಮಟ್ಟದ ಮೊದಲ ನಾಯಕ ಅವರು. 

ಜಸ್ಟಿನ್‌ ಅವರ ಹೇಳಿಕೆಗೆ ಭಾರತ ಕಟುವಾದ ಪ್ರತಿಕ್ರಿಯೆ ನೀಡಿದೆ. ಇದು ಪ್ರಜಾಸತ್ತಾತ್ಮಕ ದೇಶವೊಂದರ ಆಂತರಿಕ ವಿಚಾರ. ಈ ಬಗ್ಗೆ ಜಸ್ಟಿನ್‌ ಅವರು ಮಾತನಾಡುವ ಅಗತ್ಯ ಇರಲಿಲ್ಲ ಮತ್ತು ಅವರಿಗೆ ಈ ವಿಚಾರದಲ್ಲಿ ಪೂರ್ಣ ಮಾಹಿತಿಯೂ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ. 

‘ರಾಜತಾಂತ್ರಿಕ ಸಂವಾದಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು’ ಎಂದೂ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಭಾರತದಿಂದ ವಲಸೆ ಹೋಗಿ ಕೆನಡಾದಲ್ಲಿ ನೆಲೆನಿಂತವರ ಸಂಖ್ಯೆಯು ಗಣನೀಯವಾಗಿದೆ. ಇವರಲ್ಲಿ ಬಹುಸಂಖ್ಯಾತರು ಸಿಖ್ಖರು ಎಂಬುದು ಉಲ್ಲೇಖಾರ್ಹ. 

‘ಮಾತುಕತೆಯು ಮಹತ್ವದ್ದು ಎಂದು ನಾವು ನಂಬಿದ್ದೇವೆ. ಅದಕ್ಕಾಗಿಯೇ ವಿವಿಧ ಮಾರ್ಗಗಳ ಮೂಲಕ ಭಾರತ ಸರ್ಕಾರದ ಜತೆಗೆ ನೇರವಾಗಿ ನಮ್ಮ ಕಳವಳಗಳನ್ನು ಪ್ರಸ್ತಾಪಿಸಿದ್ದೇವೆ’ ಎಂದು ಟ್ರೂಡೊ ಅವರು ಹೇಳಿದ್ದಾರೆ. ಗುರು ನಾನಕ್‌ ದೇವ್ ಅವರ 551ನೇ ಜನ್ಮದಿನದ ಪ್ರಯುಕ್ತ ಸಿಖ್ಖರನ್ನು ಉದ್ದೇಶಿಸಿ ಆನ್‌ಲೈನ್‌ ಮೂಲಕ ಟ್ರೂಡೊ ಅವರು ಮಾತನಾಡಿದ್ದಾರೆ. 

ಕೆನಡಾದ ರಕ್ಷಣಾ ಸಚಿವ, ಭಾರತ ಮೂಲದ ಹರ್ಜಿತ್‌ ಸಜ್ಜನ್‌ ಅವರೂ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಜಸ್ಟಿನ್‌ ಅವರ ಹೇಳಿಕೆಯನ್ನು ಭಾರತದ ರಾಜಕೀಯ ಪಕ್ಷಗಳು ಕೂಡ ಖಂಡಿಸಿವೆ.

***

ಸಣ್ಣ ಗುಂಪಿನಲ್ಲಿ ಮಾತುಕತೆಗೆ ಬರುವಂತೆ ಸರ್ಕಾರ ಒತ್ತಾಯಿಸುತ್ತಿದೆ. ಇದು ನಮ್ಮನ್ನು ವಿಭಜಿಸುವ ಯತ್ನ. ಸರ್ಕಾರದ ತಂತ್ರಗಳ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ

-ಬಲದೇವ್‌ ಸಿಂಗ್‌, ಭಾರತೀಯ ಕಿಸಾನ್‌ ಯೂನಿಯನ್‌, ಭಟಿಂಡಾ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು