ಸೋಮವಾರ, ಮೇ 17, 2021
21 °C

ಜಗದ ಗಮನ ಸೆಳೆದ ‘ರೈತ’: ಹೋರಾಟದ ಬಗ್ಗೆ ಅಮೆರಿಕ, ಬ್ರಿಟನ್‌ ಸಂಸದರ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರವು ಜಾರಿಗೆ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ‍್ರತಿಭಟನೆಯು ಅಂತರರಾಷ್ಟ್ರೀಯ  ಮಟ್ಟದಲ್ಲಿ ಮತ್ತೆ ಗಮನ ಸೆಳೆದಿದೆ. ಪ್ರತಿಭಟನೆಯ ಬಗ್ಗೆ ಅಮೆರಿಕದ ಏಳು ಸಂಸದರು ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರಿಗೆ ಪತ್ರ ಬರೆದು ‘ಗಂಭೀರ ಕಳವಳ’ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯನ್ನು ಅವರು ‘ಆಂತರಿಕ ಅಶಾಂತಿ’ ಎಂದು ಹೇಳಿದ್ದಾರೆ.

ಬ್ರಿಟನ್‌ನ ಹಲವು ಸಂಸದರು ಕೂಡ ಅಲ್ಲಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ಗಣರಾಜ್ಯೋತ್ಸವ ದಿನದ ಅತಿಥಿಯಾಗಿರುವ ಅವರು ಭಾರತಕ್ಕೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಜತೆಗೆ ರೈತರ ಪ್ರತಿಭಟನೆಯ ವಿಷಯ ಚರ್ಚಿಸಬೇಕು ಎಂದು ಈ ಪತ್ರದಲ್ಲಿ ಕೋರಲು ನಿರ್ಧರಿಸಿದ್ದಾರೆ. 

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಮತ್ತು ಅವರ ಸಚಿವ ಸಂಪುಟದ ಕೆಲವು ಸದಸ್ಯರು ರೈತರ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕಟುವಾದ ಪ್ರತಿಕ್ರಿಯೆ ನೀಡಿದ್ದ ಭಾರತ, ಅದು ‘ಅನಪೇಕ್ಷಿತ’ ಎಂದು ಹೇಳಿತ್ತು.

ರಾಜಕೀಯ ಪ್ರತಿಸ್ಪರ್ಧಿಗಳ ಹುನ್ನಾರ: ಮೋದಿ
ರೈತರ ಜಮೀನನ್ನು ಬೇರೆ ಯಾರೂ ಕೈವಶ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.  ಪಿಎಂ–ಕಿಸಾನ್‌ ಯೋಜನೆ ಅಡಿಯಲ್ಲಿ 9 ಕೋಟಿ ರೈತರಿಗೆ ₹18 ಸಾವಿರ ಕೋಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ಕಾರಣದಿಂದ ಪ್ರಯೋಜನ ಪಡೆದ ರೈತರ ಯಶೋಗಾಥೆಗಳನ್ನು ಅವರು ಆಲಿಸಿದರು. 

ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಸರ್ಕಾರದ ಮಾತುಕತೆ ವಿಫಲವಾಗಲು ರಾಜಕೀಯ ಪ್ರತಿಸ್ಪರ್ಧಿಗಳೇ ಕಾರಣ ಎಂದು ಮೋದಿ ಆರೋಪಿಸಿದ್ದಾರೆ. ಎಲ್ಲರ ಜತೆಗೂ ಸಂವಾದ ನಡೆಸಲು ಸರ್ಕಾರ ಬಯಸಿದೆ. ರೈತರ ಸಮಸ್ಯೆಗಳ ಬಗ್ಗೆ ಸತ್ಯಾಂಶಗಳಿಂದ ಕೂಡಿದ ತರ್ಕಬದ್ಧವಾದ ಮಾತುಕತೆಗೆ ಸರ್ಕಾರವು ಸಿದ್ಧ ಎಂದು‍ ಅವರು ಹೇಳಿದರು.

‘ದಾರಿ ತಪ್ಪಿಸುವುದು ಮೋದಿ ಭಾಷಣದ ಗುರಿ’: ಪ್ರಧಾನಿಯ ಭಾಷಣವು ಪ್ರತಿಭಟನೆಯನ್ನು ವಿಭಜಿಸಿ ದಾರಿತಪ್ಪಿಸುವ ಉದ್ದೇಶ ಹೊಂದಿದೆ ಎಂದು ರೈತರು ಆಕ್ಷೇಪಿಸಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳು ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರತಿಭಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ರಾಜಕೀಯ ಪಕ್ಷವನ್ನು ಪ್ರತಿಭಟನೆಯ ವೇದಿಕೆಗೆ ಬರಲು ಅವಕಾಶ ಕೊಟ್ಟಿಲ್ಲ. ಪ್ರಧಾನಿಯು ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ರೈತರ ನಾಯಕ ಅಭಿಮನ್ಯು ಕೋಹರ್‌ ಹೇಳಿದ್ದಾರೆ.

ಎನ್‌ಆರ್‌ಐಗಳ ಬೆಂಬಲ
ಪಂಜಾಬ್‌ ನಿವಾಸಿಗಳ ಒಂದು ಗುಂಪು ರೈತರ ಪ್ರತಿಭಟನೆಯ ಪರವಾಗಿ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದೆ. ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತಕ್ಕೆ ಬಂದು ಪ್ರತಿಭಟನೆಗೆ ‘ನೈತಿಕ ಮತ್ತು ಭೌತಿಕ’ ಬೆಂಬಲ ನೀಡಬೇಕು ಎಂದು ಅವರು ಕೋರಿದ್ದಾರೆ. ಮಾಣಿಕ್‌ ಗೋಯಲ್‌ ಮತ್ತು ಜೋಬನ್‌ ರಾಂಧವ ಅವರು ‘ಎನ್‌ಆರ್‌ಐ ಚಲೋ ದೆಹಲಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಎನ್‌ಆರ್‌ಐಗಳ ಒಂದು ಗುಂಪು ಇದೇ 30ರಂದು ದೆಹಲಿಯ ಸಿಂಘು ಗಡಿಗೆ ಭೇಟಿ ನೀಡಲಿದೆ. 

ದಾಂದಲೆ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನ ಕಾರ್ಯಕ್ರಮ ನಡೆಯುತ್ತಿದ್ದ ಭಟಿಂಡಾ ಬಿಜೆಪಿ ಕಚೇರಿಯಲ್ಲಿ ಕೆಲವು ರೈತರು ದಾಂದಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿಯ ಐವರು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಪ್ರಧಾನಿಯ ಭಾಷಣದ ಸಮಯದಲ್ಲಿ ಸಂಭಾಲ್‌ನ ಕೆಲವು ರೈತರು ತಟ್ಟೆಗಳನ್ನು ಬಡಿದು ಮತ್ತು ಚಪ್ಪಾಳೆ ತಟ್ಟಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು