ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ 'ಚಕ್ಕಾ ಜಾಮ್': ಟಿಕಾಯತ್

Last Updated 6 ಫೆಬ್ರುವರಿ 2021, 3:28 IST
ಅಕ್ಷರ ಗಾತ್ರ

ಗಾಜಿಪುರ: ಫೆಬ್ರವರಿ 6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ (ರಸ್ತೆ ದಿಗ್ಭಂಧನ) ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ನಾವು ದೆಹಲಿಯಲ್ಲಿ ಏನನ್ನೂ ಮಾಡಲು ಹೋಗುತ್ತಿಲ್ಲ. ಅಲ್ಲಿನ ರಾಜನೇ (ನರೇಂದ್ರ ಮೋದಿ) ಅದನ್ನು ಬಂಧಿಯಾಗಿಸಿದ್ದಾರೆ. ಹಾಗಾಗಿ ನಾವು ಜಾಮ್ (ದಿಗ್ಭಂಧನ) ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಚಕ್ಕಾ ಜಾಮ್ ಕುರಿತು ಹೆಚ್ಚಿನ ಮಾಹಿತಿ ನೀಡಿದ ಟಿಕಾಯತ್, ಮೂರು ತಾಸುಗಳ ಕಾಲ ರಸ್ತೆ ದಿಗ್ಭಂಧನ ಹೇರಲಾಗುವುದು. ಇದು ದೆಹಲಿಯಲ್ಲಿ ನಡೆಯುವುದಿಲ್ಲ. ಆದರೆ ದೇಶದ ಇತರೆ ಭಾಗಗಳಲ್ಲಿ ಚಕ್ಕಾ ಜಾಮ್ ಹಮ್ಮಿಕೊಳ್ಳಲಾಗುವುದು. ಚಕ್ಕಾ ಜಾಮ್‌ನಲ್ಲಿ ಸಿಲುಕುವ ವಾಹನಗಳಿಗೆ ನೀರು ಹಾಗೂ ಆಹಾರ ಒದಗಿಸಲಾಗುವುದು. ಕಡಲೆಕಾಯಿಯಂತಹ ವಸ್ತುಗಳನ್ನು ಜನರಿಗೆ ವಿತರಿಸಲಾಗುವುದು. ಹಾಗೆಯೇ ಜನರಿಗೆಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಮೂರು ನೂತನ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿರುವ ರೈತರು, ಕೊರೆಯುವ ಚಳಿಯನ್ನು ಲೆಕ್ಕಿಸದೇ ಹಗಲಿರುಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಕಳೆದ ವರ್ಷ ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈ ನಡುವೆ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಗಾಜಿಪುರ, ಟಿಕ್ರಿ ಹಾಗೂ ಸಿಂಘು ಪ್ರತಿಭಟನಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರ ಸಂಚಾರವನ್ನು ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್ ಬ್ಯಾರಿಕೇಡ್ ಹಾಗೂ ತಂತಿಗಳನ್ನು ಸ್ಥಾಪಿಸಲಾಗಿದೆ.

ಬಿಕ್ಕಟ್ಟನ್ನು ನಿವಾರಿಸಲು ರೈತರು ಹಾಗೂ ಸರ್ಕಾರದ ಜೊತೆಗಿನ ಮುಂದಿನ ಹಂತದ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ಈ ಸಂಬಂಧ ರೈತರ ಸಂಘಗಳ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳ ನಾಯಕರು ಪ್ರತಿಭಟನಾ ಸ್ಥಳವನ್ನು ತಲುಪಿದರೂ ಹೋರಾಟವು ರಾಜಕೀಯದಿಂದ ಹೊರತಾಗಿದ್ದು, ಇದು ರೈತರ ಪ್ರತಿಭಟನೆಯಾಗಿದೆ ಎಂಬುದನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT