ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಪ್ರತಿಭಟನೆ ಕೊನೆಗೊಳಿಸುವ ಭರವಸೆಯಿದೆ: ನರೇಂದ್ರ ಸಿಂಗ್ ತೋಮರ್

Last Updated 5 ಡಿಸೆಂಬರ್ 2020, 5:52 IST
ಅಕ್ಷರ ಗಾತ್ರ

ನವದೆಹಲಿ: ರೈತರು ಸಕಾರಾತ್ಮಕವಾಗಿ ಚಿಂತನೆ ನಡೆಸಿ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂಬ ಭರವಸೆಯಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ರೈತರ ಜತೆ ಇಂದು (ಶನಿವಾರ) ಮಧ್ಯಾಹ್ನ 2 ಗಂಟೆಗೆ ಮಾತುಕತೆ ನಿಗದಿಪಡಿಸಲಾಗಿದೆ.

ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸಚಿವರು ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆಗೆ ಕೇಂದ್ರ ಸರ್ಕಾರ ಮಣಿಯದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಮತ್ತು ಡಿಸೆಂಬರ್ 8ಕ್ಕೆ ಭಾರತ ಬಂದ್‌ಗೆ ಕರೆ ನೀಡಲಾಗುವುದು ಎಂದೂ ರೈತರು ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನ ರೈತರಿಂದಲೂ ಪ್ರತಿಭಟನೆ: ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೆಕು. ಕನಿಷ್ಠ ಬೆಂಬಲ ಬೆಲೆ ಮುಂದುವರಿಸಬೇಕು ಎಂದು ರಾಜಸ್ಥಾನದ ರೈತರೂ ಆಗ್ರಹಿಸಿದ್ದಾರೆ.

‘ಇವತ್ತಿನ ಮಾತುಕತೆಯಿಂದಲೂ ಯಾವುದೇ ಪ್ರಯೋಜನವಾಗದಿದ್ದರೆ ರಾಜಸ್ಥಾನ ರೈತರೂ ದೆಹಲಿಗೆ ಜಾಥಾ ಹಮ್ಮಿಕೊಳ್ಳಲಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಕಿಸಾನ್ ಮಹಾಪಂಚಾಯತ್‌ನ ಅಧ್ಯಕ್ಷ ರಾಮ್‌ಪಾಲ್ ಜಾಟ್ ಹೇಳಿದ್ದಾರೆ.

ಈ ಹಿಂದೆ ರೈತರ ಜತೆ ಸರ್ಕಾರ ನಡೆಸಿದ ಮಾತುಕತೆಗಳಲ್ಲಿ ಒಮ್ಮತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಐದನೇ ಬಾರಿ ಮಾತುಕತೆ ನಿಗದಿಪಡಿಸಲಾಗಿದೆ.

ಮೋದಿ ನಿವಾಸಕ್ಕೆ ಶಾ, ತೋಮರ್: ರೈತರ ಜತೆಗಿನ ಮಾತುಕತೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರೈತರ ಜತೆಗಿನ ಮಾತುಕತೆಗೆ ಸಂಬಂಧಿಸಿ ಸಚಿವರು ಪ್ರಧಾನಿ ಬಳಿ ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT