ಮಂಗಳವಾರ, ಮಾರ್ಚ್ 2, 2021
21 °C

ರೈತರ ರ‍್ಯಾಲಿ: ಪೊಲೀಸರಿಗೆ ಅಧಿಕಾರ - ಸುಪ್ರೀಂ ಕೋರ್ಟ್ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪ್ರತಿಭಟನಾನಿರತ ರೈತರು ಗಣರಾಜ್ಯೋತ್ಸವದಂದು (ಜ.26) ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಉದ್ದೇಶಿಸಿರುವುದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಅನುಮತಿ ನೀಡಬೇಕೇ ಬೇಡವೇ ಎಂಬುದು ದೆಹಲಿ ಪೊಲೀಸರಿಗೆ ಬಿಟ್ಟ ವಿಚಾರ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ಉದ್ದೇಶಿತ ಟ್ರ್ಯಾಕ್ಟರ್ ರ‍್ಯಾಲಿಯು ಗಣರಾಜ್ಯೋತ್ಸವ ಸಮಾರಂಭಕ್ಕೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಅದಕ್ಕೆ ಅಥವಾ ಯಾವುದೇ ರೀತಿಯ ಪ್ರತಿಭಟನೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ನ್ಯಾಯಪೀಠ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪೊಲೀಸರಿಗೆ ಅಧಿಕಾರವಿದೆ ಎಂದಿದೆ.

‘ಪೊಲೀಸರ ಅಧಿಕಾರಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಬೇಕೇ? ಏನು ಮಾಡಬೇಕೆಂದು ನಾವು ನಿಮಗೆ ಹೇಳಲು ಹೋಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ವಿನೀತ್ ಸರನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು.

‘ರೈತರು ದೆಹಲಿಗೆ ಪ್ರವೇಶಿಸುವ ಪ್ರಶ್ನೆಯು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದೆ. ಅದನ್ನು ಪೊಲೀಸರು ನಿರ್ಧರಿಸುತ್ತಾರೆ’ ಎಂದ ಪೀಠ, ಈ ವಿಷಯವನ್ನು ಎದುರಿಸಲು ನಿಮಗೆ ಎಲ್ಲ ಅಧಿಕಾರವಿದೆ ಎಂದು ಅಟಾರ್ನಿ ಜನರಲ್ ಅವರಿಗೆ ತಿಳಿಸಿತು. ವಿಚಾರಣೆಯನ್ನು ಜ. 20ಕ್ಕೆ ಮುಂದೂಡಲಾಯಿತು.

ಗಣರಾಜ್ಯೋತ್ಸವ ಆಚರಣೆಗೆ ಅಡ್ಡಿಪಡಿಸುವ ಮತ್ತು ತೊಂದರೆ ನೀಡಲು ಪ್ರಯತ್ನಿಸುವ ಯಾವುದೇ ಉದ್ದೇಶಿತ ಮೆರವಣಿಗೆ ಅಥವಾ ಪ್ರತಿಭಟನೆಯು ‘ರಾಷ್ಟ್ರಕ್ಕೆ ಮುಜುಗರ’ ಉಂಟು ಮಾಡುತ್ತದೆ ಎಂದು ದೆಹಲಿ ಪೊಲೀಸರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

ಸುಪ್ರೀಂ ಕೋರ್ಟ್ ನೇಮಿಸಿರುವ ನಾಲ್ವರು ಸದಸ್ಯರ ಸಂಧಾನ ಸಮಿತಿಯಲ್ಲಿ ಮೂವರನ್ನು ಬದಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಈ ಬಗ್ಗೆಯೂ ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸುವುದಾಗಿ ತಿಳಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು