ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಡಿಗಳಲ್ಲಿ ಸಿಸಿಟಿವಿ, ಫ್ಯಾನ್: ಹೋರಾಟ ತೀವ್ರಗೊಳಿಸಲು ರೈತರು ಸಜ್ಜು

Last Updated 12 ಫೆಬ್ರುವರಿ 2021, 4:32 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ‘ಕಿಸಾನ್ ಮಹಾಪಂಚಾಯತ್’ಆಯೋಜಿಸಲು ಯೋಜನೆ ರೂಪಿಸಿವೆ.

ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ತರುವ ಬೇಡಿಕೆಗಳನ್ನು ಈಡೇರಿಸುವವರೆಗೂ ನಡೆಯುತ್ತಿರುವ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.

ಹೋರಾಟ ತೀವ್ರಗೊಳಿಸಲು ಫೆಬ್ರವರಿ 12 ಮತ್ತು ಫೆಬ್ರವರಿ 18 ರ ನಡುವೆ ಸಂಯುಕ್ತ ಕಿಸಾನ್ ಮೋರ್ಚಾವು ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.

'ಮಹಾಪಂಚಾಯತ್‌ಗಳು' ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ:

1. ಫೆಬ್ರವರಿ 12 ರಂದು ಮೊರಾದಾಬಾದ್ (ಉತ್ತರ ಪ್ರದೇಶ) ದಲ್ಲಿ 'ಮಹಾಪಂಚಾಯತ್' ನಡೆಯಲಿದ್ದು, ನಂತರ ಫೆಬ್ರವರಿ 13 ರಂದು ಬಹದ್ದೂರ್‌ ಗಡ ಬೈಪಾಸ್ (ಹರಿಯಾಣ), ಫೆಬ್ರವರಿ 18 ರಂದು ಶ್ರೀ ಗಂಗನಗರ (ರಾಜಸ್ಥಾನ), ಫೆಬ್ರವರಿ 19 ರಂದು ಹನುಮಾನ್‌ಗಡ (ರಾಜಸ್ಥಾನ) ಮತ್ತು ಸಿಲ್ಕರ್ (ರಾಜಸ್ಥಾನ) ಪ್ರದೇಶದಲ್ಲಿ ಫೆಬ್ರವರಿ 23 ರಂದು ಮಹಾಪಂಚಾಯತ್ ನಡೆಯಲಿದೆ.

2. ಫೆಬ್ರವರಿ 12 ರಂದು ರಾಜಸ್ಥಾನದ ಎಲ್ಲಾ ರಸ್ತೆ ಟೋಲ್ ಪ್ಲಾಜಾಗಳನ್ನು ಟೋಲ್ ಫ್ರೀ ಮಾಡಲಾಗುವುದು ಎಂದು ದರ್ಶನ್ ಪಾಲ್ ಹೇಳಿದ್ದಾರೆ.

3. ಫೆಬ್ರುವರಿ 14ರಂದು "ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ" ವನ್ನು ಸ್ಮರಿಸಲು ಕ್ಯಾಂಡಲ್ ಮೆರವಣಿಗೆ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

4. ಫೆಬ್ರವರಿ 18 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ದೇಶದಾದ್ಯಂತ 'ರೈಲ್ ರೋಕೊ' ಆಂದೋಲನಕ್ಕೆ ಕರೆ ನೀಡಿದೆ.

5. ಸಿಂಘು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ರೈತ ಸಂಘಟನೆಗಳು ಭದ್ರತೆಗೆ ಒತ್ತು ನೀಡುತ್ತದೆ. ಮುಂಬರುವ ಬೇಸಿಗೆಯಲ್ಲಿ ಶಾಖದಿಂದ ರಕ್ಷಣೆ ಪಡೆಯಲು ವಿದ್ಯುತ್ ಫ್ಯಾನ್‌ಗಳು ಮತ್ತು ವೈ-ಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಆಪ್ಟಿಕಲ್ ಫೈಬರ್ ಲೈನ್ ಹಾಕುವ ಮೂಲಕ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ.

6. ಹೊಸ ಕೃಷಿ ಕಾನೂನುಗಳನ್ನು ಸದ್ಯಕ್ಕೆ ಹಿಂಪಡೆಯುವ ಸಾಧ್ಯತೆ ಬಗ್ಗೆ ಅನುಮಾನಗೊಂಡಿರುವ ರೈತ ಸಂಘಟನೆಗಳು ಈ ಎಲ್ಲ ವ್ಯವಸ್ಥೆ ಮಾಡಿಕೊಂಡು ನಿರಂತರ ಹೋರಾಟಕ್ಕೆ ಸಜ್ಜಾಗಿವೆ.

ಕಳೆದ 75 ದಿನಗಳಿಂದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆಗಳಿಂದ ದೆಹಲಿ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರಕ್ಕೆ ಆಗಮಿಸಿರುವ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ರೈತರ ಪ್ರತಿಭಟನೆ ಕುರಿತಂತೆ ರಾಜ್ಯಸಭೆಯಲ್ಲಿ ನಡೆದ 15 ಗಂಟೆಗಳ ಚರ್ಚೆ ಬಳಿಕ ಉತ್ತರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದರು. ಬೆಂಬಲ ಬೆಲೆ ಇತ್ತು, ಇದೆ, ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT