ನವದೆಹಲಿ (ಪಿಟಿಐ): ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್‌ನ 30 ಕಡೆಗಳಲ್ಲಿ ಸಿಬಿಐ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಆಪರೇಷನ್ ಕನಕ್ 2’ ಕಾರ್ಯಾಚರಣೆ ಭಾಗವಾಗಿ ಆಹಾರ ಧಾನ್ಯಗಳ ವರ್ತಕರು, ಅಕ್ಕಿ ಗಿರಣಿ ಮಾಲೀಕರು ಮತ್ತು ಎಫ್‌ಸಿಐನ ಹಾಲಿ ಮತ್ತು ನಿವೃತ್ತ ಅಧಿಕಾರಿಗಳ ನಿವಾಸಗಳಲ್ಲಿ ಶೋಧ ನಡೆಸಲಾಯಿತು. ರಾಜ್‌ಪುರ, ಪಟಿಯಾಲ, ಫತೇಹ್‌ಗಢ ಸಾಹಿಬ್, ಸರ್‌ಹಿಂದ್, ಮೊಹಾಲಿ, ಮೊಗ, ಫಿರೋಜ್‌ಪುರ, ಲೂಧಿಯಾನ, ಸಂಗ್ರೂರು ಮತ್ತಿತರ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಕಳಪೆ ಗುಣಮಟ್ಟದ ಆಹಾರ ಧಾನ್ಯವನ್ನು ಎಫ್‌ಸಿಐಗೆ ವಿತರಿಸಲು ಖಾಸಗಿ ಗಿರಣಿಗಳಿಂದ ಪ್ರತಿ ಟ್ರಕ್‌ಗೆ ₹1000–4000 ಲಂಚ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡ ಎರಡನೇ ಶೋಧ ಕಾರ್ಯಾಚರಣೆ ಇದಾಗಿದ್ದು, ಜ.13ರಂದು ಮೊದಲ ಸುತ್ತಿನ ಶೋಧ ನಡೆಸಲಾಗಿತ್ತು.
ಪ್ರಕರಣ ಸಂಬಂಧಿಸಿದಂತೆ ಎಫ್‌ಸಿಐ ಕಾರ್ಯನಿರ್ವಾಹಕ ನಿರ್ದೇಶಕ ಸುದೀಪ್ ಸಿಂಗ್ ಸೇರಿದಂತೆ ಒಟ್ಟು 74 ಆರೋಪಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಪೈಕಿ 34 ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ನಿವೃತ್ತರು, 17 ಖಾಸಗಿ ವ್ಯಕ್ತಿಗಳು ಮತ್ತು 20 ಸಂಸ್ಥೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.