ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗಳಿಗೆ ಅಭಿನಂದನೆ ಕೆಟ್ಟ ಅಭಿರುಚಿ ಎಂದ ಜಡ್ಜ್

Last Updated 24 ಆಗಸ್ಟ್ 2022, 4:29 IST
ಅಕ್ಷರ ಗಾತ್ರ

ಮುಂಬೈ: ಅತ್ಯಾಚಾರ ಅಪರಾಧಿಗಳನ್ನು ಅಭಿನಂದಿಸಿರುವುದಕ್ಕೆ ನಿವೃತ್ತ ನ್ಯಾಯಾಧೀಶ ಯು.ಡಿ. ಸಾಳ್ವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರು ಬಿಲ್ಕಿಸ್‌ ಬಾನು ಪ್ರಕರಣಕ್ಕೆ ಸಂಬಂಧಿಸಿ 14 ವರ್ಷಗಳ ಹಿಂದೆ ತೀರ್ಪು ನೀಡಿದ್ದರು.

‘ಯುನೈಟೆಡ್ ಅಗೈನ್ಸ್ಟ್ ಜಸ್ಟೀಸ್ ಆ್ಯಂಡ್ ಡಿಸ್ಕ್ರಿಮಿನೇಷನ್’ ಆಯೋಜಿಸಿದ್ದ ‘ಸಾಲಿಡಾರಿಟಿ ವಿತ್ ಬಿಲ್ಕಿಸ್‌ ಬಾನು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷಮಾಪಣೆ ನೀಡುವುದು ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬಿಟ್ಟಿರುವ ವಿಚಾರ. ಆದರೆ ಅಪರಾಧಿಗಳನ್ನು ಅಭಿನಂದಿಸುವುದು ಕೆಟ್ಟ ಅಭಿರುಚಿಯಿಂದ ಕೂಡಿದ ಕ್ರಮ ಎಂದು ಅವರು ಹೇಳಿದ್ದಾರೆ.

‘ಅವರನ್ನು ಅಪರಾಧಿಗಳೆಂದು ಘೋಷಿಸುವ ಮೂಲಕ ನಾನೇನೋ ವಿಶೇಷವಾದ ಕೆಲಸ ಮಾಡಿದ್ದೇನೆ ಎಂದು ಭಾವಿಸುವುದಿಲ್ಲ. ತೀರ್ಪು ನೀಡುವುದು ನನ್ನ ಕರ್ತವ್ಯವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಕ್ಷಮಾಪಣೆ ನೀಡುವ ಅಧಿಕಾರ ಆಡಳಿತಕ್ಕಿದೆ. ಇದು ಕಾನೂನಿನ ಅಡಿಯಲ್ಲಿ ಸರ್ಕಾರಕ್ಕೆ ನೀಡಿರುವ ಅಧಿಕಾರ. ಹೀಗಾಗಿ ಈ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ ಅವರನ್ನು (ಅಪರಾಧಿಗಳನ್ನು) ಅಭಿನಂದಿಸಿರುವುದು ಅತ್ಯಂತ ಕೆಟ್ಟ ಅಭಿರುಚಿಯ ಕಾರ್ಯ’ ಎಂದು ಸಾಳ್ವಿ ಹೇಳಿದ್ದಾರೆ.

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಆಗಸ್ಟ್ 15ರಂದು ಗುಜರಾತ್‌ನ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಅ‌ನ್ವಯ ಈ ಕ್ರಮ ಕೈಗೊಳ್ಳಲಾಗಿತ್ತು. ಜೈಲಿನಿಂದ ಹೊರಬರುವಾಗ ಅಪರಾಧಿಗಳಿಗೆ ಹಾರ ಹಾಕಿ ಸ್ವಾಗತಿಸಲಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರ ದೇಶದಾದ್ಯಂತ ಆಕ್ಷೇಪಕ್ಕೆ ಗುರಿಯಾಗಿದೆ.

ಬಿಲ್ಕಿಸ್‌ ಬಾನು ಮೇಲೆ 2002ರ ಗೋಧ್ರಾ ಹತ್ಯಾಕಾಂಡದ ನಂತರದಲ್ಲಿ 11 ಮಂದಿ ಅತ್ಯಾಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು 5 ತಿಂಗಳ ಗರ್ಭಿಣಿ ಆಗಿದ್ದರು. ಈ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಆರೋಪದ ಮೇಲೆ 11 ಮಂದಿಗೆ 2008ರ ಜನವರಿ 21 ಮುಂಬೈ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT