ಶುಕ್ರವಾರ, ಜುಲೈ 1, 2022
22 °C

4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಮತ್ತೆ ಅಧಿಕಾರ ಹಿಡಿಯುವ ಮೂಲಕ ಭರ್ಜರಿ ಸಾಧನೆ ಮಾಡಿದ್ದು, ಆಮ್ ಆದ್ಮಿ ಪಂಜಾಬ್‌ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. 4 ರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಂಡ ಬಿಜೆಪಿ ತನ್ನ ಮತ ಹಂಚಿಕೆಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಕಾಂಗ್ರೆಸ್ ಉತ್ತರಾಖಂಡ ಬಿಟ್ಟು ಉಳಿದೆಡೆ ಮತ ಗಳಿಕೆ ಪ್ರಮಾಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್‌ನಲ್ಲಿ ಎಎಪಿ ಮತ ಗಳಿಕೆಯಲ್ಲಿ ಭಾರೀ ಪ್ರಗತಿ ಸಾಧಿಸಿದೆ.

ಉತ್ತರ ಪ್ರದೇಶ:

2017ರ ಚುನಾವಣೆಯಲ್ಲಿ 312 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ 255 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ ಗೆದ್ದ ಸ್ಥಾನಗಳಲ್ಲಿ ಇಳಿಕೆ ಕಂಡಿದ್ದರೂ ಸಹ ಮತ ಗಳಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಚುನಾವಣಾ ಆಯೋಗದ ಅಂಕಿ ಅಂಶದ ಪ್ರಕಾರ, ಕಳೆದ ಚುನಾವಣೆಯಲ್ಲಿ ಶೇಕಡ 39.67 ರಷ್ಟಿದ್ದ(3,44,03,299 ಮತ) ಕೇಸರಿ ಪಕ್ಷದ ಮತಗಳಿಕೆ ಪ್ರಮಾಣ ಈ ಬಾರಿ ಶೇಕಡ 41.3ಕ್ಕೆ ಏರಿದೆ.

ಬಿಜೆಪಿ ಪ್ರಬಲ ಪೈಪೋಟಿ ಒಡ್ಡಿದ್ದ ಸಮಾಜವಾದಿ ಪಕ್ಷವು ಮತ ಗಳಿಕೆ ಮತ್ತು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

2017ರಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಶೇಕಡ 29ರಷ್ಟು ಮತಗಳಿಕೆಯೊಂದಿಗೆ ಕೇವಲ 47 ಸ್ಥಾನ ಗೆದ್ದಿದ್ದ ಎಸ್‌ಪಿ, ಈ ಬಾರಿ ಶೇಕಡ 35ರಷ್ಟು ಮತ ಗಳಿಕೆಯೊಂದಿಗೆ 130 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.

ಇನ್ನೂ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಶೇಕಡ 6. 25 ರಿಂದ 2. 35ಕ್ಕೆ ಇಳಿದಿದ್ದು, ಕ್ಷೇತ್ರಗಳ ಸಂಖ್ಯೆಯಲ್ಲಿ 7 ರಿಂದ 2ಕ್ಕೆ ಕುಸಿದಿದೆ.

ಕೇವಲ 1 ಕ್ಷೇತ್ರದಲ್ಲಿ ಗೆದ್ದಿರುವ ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷವು ಶೇಕಡ 12.9ರಷ್ಟು ಮತ ಗಳಿಕೆ ಕಂಡಿದೆ.

ಪಂಜಾಬ್‌:

ಪಂಜಾಬ್‌ನಲ್ಲಿ 92 ಕ್ಷೇತ್ರಗಳನ್ನು ಗೆದ್ದು ಇತಿಹಾಸ ಬರೆದಿರುವ ಆಮ್ ಆದ್ಮಿ ಪಕ್ಷದ ಮತ ಗಳಿಕೆ ಪ್ರಮಾಣ ಶೇಕಡ 23.7ರಿಂದ ಶೇಕಡ 42.01ಕ್ಕೆ ಏರಿದೆ. 2017ರಲ್ಲಿ ಶೇಕಡ 38.5ರಷ್ಟು ಮತ ಗಳಿಕೆಯೊಂದಿಗೆ 77 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 18 ಕ್ಷೇತ್ರಗಳನ್ನು ಗೆದ್ದು, ಮತ ಗಳಿಕೆ ಪ್ರಮಾಣದಲ್ಲಿ ಶೇಕಡ 22.98ಕ್ಕೆ ಕುಸಿದಿದೆ.

2017ರಲ್ಲಿ ಶೇಕಡ 25.2ರಷ್ಟು ಮತಗಳಿಕೆಯೊಂದಿಗೆ 15 ಸ್ಥಾನಗಳನ್ನು ಗೆದ್ದಿದ್ದ ಶಿರೋಮಣಿ ಅಕಾಲಿದಳವು ಈ ಬಾರಿ ಶೇಕಡ 18.38ರಷ್ಟು ಮತಗಳಿಕೆಯೊಂದಿಗೆ 3 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಾತ್ರ ಸಫಲವಾಗಿದೆ.

2017ರ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ 3 ಕ್ಷೇತ್ರ ಗೆದ್ದಿದ್ದ ಬಿಜೆಪಿ, ಈ ಬಾರಿ ಎರಡಕ್ಕೆ ತೃಪ್ತಿಪಟ್ಟುಕೊಂಡಿದೆ. ಮತ ಗಳಿಕೆ ಪ್ರಮಾಣವನ್ನು ಶೇಕಡ 5.39ರಿಂದ ಶೇಕಡ 6.60ಕ್ಕೆ ಹೆಚ್ಚಿಸಿಕೊಂಡಿದೆ.

ಗೋವಾ:

ಕಳೆದ ಚುನಾವಣೆಯಲ್ಲಿ ಇಲ್ಲಿ 17 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 20 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಳೆದ ಬಾರಿ ಶೇಕಡ 32.48ರಷ್ಟಿದ್ದ ಮತ ಗಳಿಕೆ ಪ್ರಮಾಣ 33.3ಕ್ಕೆ ಏರಿಕೆಯಾಗಿದೆ. ಇಲ್ಲಿ 11 ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಶೇಕಡ 23. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಶೇಕಡ 28.3ರಷ್ಟು ಮತ ಗಳಿಕೆ ಕಂಡಿತ್ತು. ಇನ್ನು, ಎರಡು ಕ್ಷೇತ್ರ ಗೆದ್ದಿರುವ ಎಎಪಿ ಶೇಕಡ 6.77ರಷ್ಟು ಮತ ಗಳಿಸಿದೆ.

ಉತ್ತರಾಖಂಡ್:

ಇಲ್ಲಿ ಮಾತ್ರ ಬಿಜೆಪಿಯ ಮತ ಗಳಿಕೆ ಮತ್ತು ಸ್ಥಾನ ಎರಡರಲ್ಲೂ ಕುಸಿತ ಕಂಡುಬಂದಿದೆ. 2017ರಲ್ಲಿ 57 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ 47ರಲ್ಲಿ ಗೆಲುವು ಸಾಧಿಸಲಷ್ಟೇ ಸಾಧ್ಯವಾಗಿದೆ. ಮತ ಗಳಿಕೆ ಪ್ರಮಾಣ ಶೇಕಡ 46.51ರಿಂದ 44.33ಕ್ಕೆ ಕುಸಿದಿದೆ. ಆದರೆ, ಬಿಜೆಪಿಯ ಅಧಿಕಾರಕ್ಕೆ ಯಾವುದೇ ಕುಂದು ಬಂದಿಲ್ಲ.

ಆದರೆ, ಶೇಕಡ 37.91ರಷ್ಟು ಮತ ಗಳಿಕೆ ಕಂಡಿರುವ ಕಾಂಗ್ರೆಸ್ ಕೇವಲ 19 ಸ್ಥಾನ ಗೆಲ್ಲುವಲ್ಲಿ ಸಫಲವಾಗಿದೆ. 2017ರಲ್ಲಿ ಕಾಂಗ್ರೆಸ್ 33.5ರಷ್ಟು ಮತ ಗಳಿಕೆ ಕಂಡು, 11 ಸ್ಥಾನ ಗೆದ್ದಿತ್ತು.

ಮಣಿಪುರ:

ಮಣಿಪುರದಲ್ಲಿ ಮತ ಗಳಿಕೆ ಪ್ರಮಾಣದ ಜೊತೆಗೆ ಸ್ಥಾನಗಳನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. 2017ರಲ್ಲಿ ಶೇ 36.28 ರಷ್ಟು ಮತ ಗಳಿಕೆಯೊಂದಿಗೆ 21 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಶೇಕಡ 37.8ರಷ್ಟು ಮತಗಳಿಕೆಯೊಂದಿಗೆ 32 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಮತ ಗಳಿಕೆ ಪ್ರಮಾಣ ಶೇಕಡ 1.52 ರಷ್ಟು ಹೆಚ್ಚಾಗಿದ್ದರೆ, 10 ಹೆಚ್ಚು ಕ್ಷೇತ್ರಗಳನ್ನು ಕೇಸರಿ ಪಾಳಯ ಗೆದ್ದಿದೆ.

ಜೆಡಿಯು ಶೇಕಡ 10.77ರಷ್ಟು ಮತ ಗಳಿಕೆಯೊಂದಿಗೆ 6 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ಶೇಕಡ 16.83ರಷ್ಟು ಮತ ಗಳಿಕೆ ಕಂಡಿದ್ದರೂ ಕೇವಲ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು