ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಬಂಗಾಳ ಚುನಾವಣೆ: ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ

Last Updated 6 ಮಾರ್ಚ್ 2021, 20:18 IST
ಅಕ್ಷರ ಗಾತ್ರ

ನವದೆಹಲಿ: ತೃಣಮೂಲ ಪಕ್ಷದ (ಟಿಎಂಸಿ) ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ದಿನೇಶ್ ತ್ರಿವೇದಿ ಅವರು ನವದೆಹಲಿಯಲ್ಲಿ ಶನಿವಾರದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು. ನಡ್ಡಾ ಅವರು ತ್ರಿವೇದಿ ಅವರಿಗೆ ಬಿಜೆಪಿ ಪಕ್ಷದ ಶಾಲು ಹೊದಿಸಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ 70ವರ್ಷದ ತ್ರಿವೇದಿ, ನಾನು ಕಾಯುತ್ತಿದ್ದ ಸುವರ್ಣ ಕ್ಷಣ ಇದಾಗಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಸ್ಪರ್ಧಿಸುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದೇನೆ. ಬಂಗಾಳವು ಟಿಎಂಸಿಯನ್ನು ತಿರಸ್ಕರಿಸಿದೆ. ಅಲ್ಲಿನ ಜನರು ಭ್ರಷ್ಟಾಚಾರ ಅಥವಾ ಹಿಂಸಾಚಾರವನ್ನಲ್ಲ, ಪ್ರಗತಿಯನ್ನು ಬಯಸುತ್ತಿದ್ದಾರೆ. ನೈಜ ಬದಲಾವಣೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆದರ್ಶಗಳನ್ನು ಮರೆತಿದ್ದಾರೆ.‘ಕೆಲವು ರಾಜಕೀಯ ಪಕ್ಷಗಳಿಗೆ ಕುಟುಂಬವೇ ಸರ್ವೋಚ್ಚ. ಆದರೆ, ಬಿಜೆಪಿಗೆ ಜನರೇ ಸರ್ವೋಚ್ಚರು. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ವಿದೇಶಿಗರು ಸಹ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ದಿನೇಶ್ ತ್ರಿವೇದಿ ಅವರು ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.

ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಗಳ ಪೈಕಿ, 70 ವರ್ಷದ ತ್ರಿವೇದಿ ಅವರೂ ಒಬ್ಬರಾಗಿದ್ದಾರೆ. ‘ತ್ರಿವೇದಿ ಅವರು ತತ್ವನಿಷ್ಠ ವ್ಯಕ್ತಿ. ಅವರಂತಹ ಉತ್ತಮ ವ್ಯಕ್ತಿ ಅರ್ಹವಲ್ಲದ ಪಕ್ಷದಲ್ಲಿದ್ದರು. ಈಗ ಅರ್ಹ ಪಕ್ಷಕ್ಕೆ ಅರ್ಹ ವ್ಯಕ್ತಿ ಬಂದಿದ್ದಾರೆ. ತ್ರಿವೇದಿ ಅವರು ತಮ್ಮ ತತ್ವಗಳಿಗೆ ಬದ್ಧರಾಗಿದ್ದರೇ ಹೊರತು ಅವುಗಳ ಜೊತೆ ಎಂದೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ’ ಎಂದು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಡ್ಡಾ ಹೇಳಿದರು.

ಇತ್ತೀಚೆಗಷ್ಟೇ ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ತನ್ನಿಂದ ಏನು ಮಾಡಲಾಗುತ್ತಿಲ್ಲ. ಉಸಿರುಗಟ್ಟುತ್ತಿದೆ ಎಂದು ಹೇಳಿಕೆ ನೀಡಿದ್ದರು.

ತ್ರಿವೇದಿ ಬಿಜೆಪಿ ಸೇರ್ಪಡೆಗೆ ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ‘ಅವರು ಕೃತಜ್ಞರಲ್ಲ. ಚುನಾವಣೆಗೂ ಮುನ್ನ ಆಡಳಿತ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂದು ಹೇಳಿದೆ.

ಸೋನಾಲಿ ಗುಹಾ ಬಿಜೆಪಿಗೆ?: ನಾಲ್ಕು ಬಾರಿ ಟಿಎಂಸಿಯ ಶಾಸಕಿಯಾಗಿದ್ದ, ಈ ಹಿಂದೆ ಮಮತಾ ಬ್ಯಾನರ್ಜಿ ಅವರಿಗೆ ಹತ್ತಿರವಾಗಿದ್ದ ಸೋನಾಲಿ ಗುಹಾ ಅವರು ಬಿಜೆಪಿ ಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ. ಚುನಾವಣೆಗೆ ಟಿಕೆಟ್ ನಿರಾಕರಿಸಿರುವ ಸುದ್ದಿ ಕೇಳಿ ಅವರು ಕಣ್ಣೀರಿಟ್ಟಿದ್ದರು.

ಪಕ್ಷ ತೊರೆದ ಟಿಎಂಸಿ ಶಾಸಕ: ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಟಿಎಂಸಿ ಪಕ್ಷದ ಶಿಬ್‌ಪುರ ಶಾಸಕ ಜಿತು ಲಾಹಿರಿ ಅವರು ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಿಷ್ಠಾವಂತ ಸೈನಿಕನಾಗಿದ್ದರೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇಂದು ಪ್ರಧಾನಿ ರ‍್ಯಾಲಿ: ಮಿಥುನ್ ಚಕ್ರವರ್ತಿ ಭಾಗಿ?

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆರಂಭಿಸಿದ್ದ ‘ಪರಿವರ್ತನ ಯಾತ್ರೆ’ಯ ಅಂಗವಾಗಿ ಈ ರ‍್ಯಾಲಿ ನಡೆಯಲಿದೆ.

ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ನಡೆಸುತ್ತಿರುವ ಅತಿಮುಖ್ಯ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಮೈದಾನದಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಬಿಜೆಪಿ ಉದ್ದೇಶವಾಗಿದೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಂದ ಹಾಗೆ ಬಂಗಾಳದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ಜರಗಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ. ಈಗಾಗಲೇ ಟಿಎಂಸಿ ಪಕ್ಷವನ್ನು ತೊರೆದಿರುವ ಅನೇಕ ಗಣ್ಯರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT