ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಾ ರ‌್ಯಾಲಿಗೆ ತಡೆಯೊಡ್ಡಲು ಅಖಿಲೇಶ್ ಯಾದವ್ ಮನೆಯ ಹೊರಗೆ ಬ್ಯಾರಿಕೇಡ್

Last Updated 7 ಡಿಸೆಂಬರ್ 2020, 8:04 IST
ಅಕ್ಷರ ಗಾತ್ರ

ಲಖನೌ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕನೌಜ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿಗೆ ತೆರಳದಂತೆ ತಡೆಯಲು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ಅವರ ನಿವಾಸದ ಸುತ್ತಲೂ ಬ್ಯಾರಿಕೇಡ್‌ ಹಾಕಲಾಗಿದ್ದು, ಗಲಭೆ ತಡೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥರಾಗಿರುವ ಯಾದವ್‌, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ರೈತರಿಗೆ ಬೆಂಬಲ ಘೋಷಿಸುವ ಸಲುವಾಗಿ, ರಾಜ್ಯದಾದ್ಯಂತ ಪಾದಯಾತ್ರೆ, ಸೈಕಲ್‌, ಮೋಟಾರ್‌ಸೈಕಲ್‌ ಹಾಗೂ ಟ್ರಾಕ್ಟರ್‌ ಸವಾರಿ ಮೂಲಕ ‘ಕಿಸಾನ್‌ ಯಾತ್ರೆ’ ರ‌್ಯಾಲಿ ನಡೆಸುವುದಾಗಿ ಘೋಷಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಾದಲ್ಲಿ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ಕಾಮಗಾರಿಗೆ ವರ್ಚುವಲ್ ಸಭೆ ಮೂಲಕ ಚಾಲನೆ ನೀಡಲಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್‌ ಅವರ ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಇದೇ ದಿನ ಅಖಿಲೇಶ್‌ ಅವರನ್ನು ತಡೆಯಲಾಗಿದೆ.

ಈ ಬಗ್ಗೆ ಮಾತನಾಡಿರುವ ಎಸ್‌ಪಿ ವಕ್ತಾರ ರಾಜೇಂದ್ರ ಚೌಧರಿ, ‘ಅಖಿಲೇಶ್ ಜೀ ಬೀದಿಗಿಳಿಯುವುದರ ಬಗ್ಗೆ ಈ ಸರ್ಕಾರವು ತುಂಬಾ ಹೆದರಿದೆ. ಅವರು (ಅಖಿಲೇಶ್‌) ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿದೆ ಮತ್ತು ರೈತರೊಂದಿಗೆ ಸೇರಿ ಟ್ರಾಕ್ಟರ್‌ ಚಾಲನೆ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಒತ್ತಿ ಹೇಳಲಿದ್ದಾರೆ. ಮೊದಲು ಕೇಂದ್ರ ಸರ್ಕಾರವು ಕಠಿಣ ಕೃಷಿ ಕಾನೂನುಗಳನ್ನು ಪರಿಚಯಿಸಿತು. ಇದೀಗ ರಾಜ್ಯ ಸರ್ಕಾರವು ನಮ್ಮ ಪಕ್ಷವು ಪ್ರತಿಭಟಿಸದಂತೆ ತಡೆಯುತ್ತಿದೆ. ಇದೆಲ್ಲವೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‌ಪಿ ಕಚೇರಿ ಮತ್ತು ಅಖಿಲೇಶ್‌ ಅವರ ನಿವಾಸ ಇರುವ ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ಮತ್ತು ಗಲಭೆ ತಡೆ ವಾಹನಗಳನ್ನು ನಿಯೋಜಿಸಲಾಗಿದೆ. ಎಸ್‌ಪಿಯ ಎಂಎಲ್‌ಸಿಗಳಾದ ಆಶು ಮಲಿಕ್‌ ಮತ್ತು ರಾಜ್‌ಪಾಲ್‌ ಕಶ್ಯಪ್‌ ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಡಿಸೆಂಬರ್‌ 7ರಂದು ರಾಜ್ಯದಾದ್ಯಂತ ‘ಕಿಸಾನ್‌ ಯಾತ್ರೆ’ ರ‌್ಯಾಲಿ ಆಯೋಜಿಸುವುದಾಗಿ ಅಖೀಲೇಶ್ ಕಳೆದವಾರ ಘೋಷಿಸಿದ್ದರು.

‘ಬಿಜೆಪಿಯ ರೈತವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಮ್ಮ ಯಾತ್ರೆಯು ಇಂದಿನಿಂದ ಆರಂಭವಾಗಲಿದೆ. ಇದನ್ನು ಪ್ರತಿ ಜಿಲ್ಲೆಗೂ ವಿಸ್ತರಿಸಲಾಗುವುದು’ ಎಂದು ಚೌಧರಿ ತಿಳಿಸಿದ್ದಾರೆ. ಯಾತ್ರೆ ವೇಳೆ ಪಕ್ಷದ ಕಾರ್ಯಕರ್ತರು ‘ರೈತರಿಗೆ ಹೆಚ್ಚಿನ ಆದಾಯ ನೀಡಿ, ಬೇಸಾಯವನ್ನು ಉಳಿಸಿ’ ಘೋಷಣೆಗಳನ್ನು ಕೂಗಲಿದ್ದಾರೆ ಎಂದೂ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿರುವ ಲಖನೌ ಜಂಟಿ ಪೊಲೀಸ್ ಕಮಿಷನರ್‌ ನವೀನ್‌ ಅರೋನಾ, ಕಾನೂನು ಸುವ್ಯವಸ್ಥೆಗೆ ತಡೆ ಉಂಟಾಗದಂತೆ ತಡೆಯಲು ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಖಿಲೇಶ್ ಯಾದವ್‌ ಸದ್ಯ ಅಜಮ್‌ಘರ್‌ ಸಂಸದರಾಗಿದ್ದು, ಕನೌಜ್‌ನಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಯಾದವ್‌ ಪತ್ರಿ ಡಿಂಪಲ್‌ ಯಾದವ್‌ ಅವರೂ ಕನೌಜ್‌ನ ಮಾಜಿ ಸಂಸದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT