ಶನಿವಾರ, ಜನವರಿ 28, 2023
15 °C

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯ ಮೇಲೆ ಭಯೋತ್ಪಾದಕರ ದಾಳಿ: ನಾಲ್ವರು ಸಾವು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯೊಂದರ ಭಾನುವಾರ ಸಂಜೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೌರಿ ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿರುವ ಡ್ಯಾಂಗ್ರಿ ಎಂಬ ಗ್ರಾಮದ ಮೂರು ಮನೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

‘ಡ್ಯಾಂಗ್ರಿ ಗ್ರಾಮದಲ್ಲಿ ಮೂರು ಮನೆಗಳಲ್ಲಿ ವಾಸಿಸುತ್ತಿದ್ದ ನಾಗರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಆಗ 10 ಮಂದಿ ಗಾಯಗೊಂಡಿದ್ದರು. ಈ ಪೈಕಿ ಮೂವರು ಆಸ್ಪತ್ರೆ ತಲುಪುವುದಕ್ಕೆ ಮೊದಲೇ ಮೃತಪಟ್ಟರು. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಸಾವಿಗೀಡಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಸತೀಶ್ ಕುಮಾರ್ (45), ದೀಪಕ್ ಕುಮಾರ್ (23), ಪ್ರೀತಮ್ ಲಾಲ್ (57) ಮತ್ತು ಶಿಶುಪಾಲ್ (32) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪವನ್ ಕುಮಾರ್ (38), ರೋಹಿತ್ ಪಂಡಿತ್ (27), ಸರೋಜ್ ಬಾಲಾ (35), ರಿದಮ್ ಶರ್ಮಾ (17) ಮತ್ತು ಪವನ್ ಕುಮಾರ್ (32) ಎಂಬುವವರು ಗಾಯಗೊಂಡಿದ್ದಾರೆ.

‘ಭಯೋತ್ಪಾದಕರ ಹೆಡೆಮುರಿ ಕಟ್ಟಲು ಹಿರಿಯ ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ’ ಎಂದು ಮೂಲವೊಂದು ತಿಳಿಸಿದೆ.

ವಿಶೇಷ ಚಿಕಿತ್ಸೆಗಾಗಿ ಗಾಯಾಳುಗಳನ್ನು ವಿಮಾನದಲ್ಲಿ ಜಮ್ಮು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡ್ಯಾಂಗ್ರಿ ಗ್ರಾಮದ ಮೇಲೆ ದಾಳಿ ಮಾಡಿದ ಇಬ್ಬರು ಉಗ್ರರನ್ನು ಹಿಡಿಯಲು ಸೇನೆ ಮತ್ತು ಸಿಆರ್‌ಪಿಎಫ್‌ನೊಂದಿಗೆ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ಹೇಳಿದ್ದಾರೆ.

ಸಂಜೆ 7 ಗಂಟೆ ಸುಮಾರಿನಲ್ಲಿ ಗ್ರಾಮ ಪ್ರವೇಶಿಸಿದ ಇಬ್ಬರು ಬಂದೂಕುದಾರಿಗಳು ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ದುರ್ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಖಂಡಿಸಿವೆ. ಭಯೋತ್ಪಾದನೆ ನಿರ್ಮೂಲನೆ ಮಾಡುದಾಗಿ ಬಿಜೆಪಿ ಶಪತ ಮಾಡಿದರೆ, ಭದ್ರತಾ ವಿಷಯದಲ್ಲಿ ಆಡಳಿತ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು