ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ಮರುಸ್ಥಾಪನೆಯಲ್ಲಿ ವಿಳಂಬ: ಕೋರ್ಟ್‌ ಮೊರೆ ಹೋದ ಲಕ್ಷದ್ವೀಪದ ಅನರ್ಹ ಸಂಸದ

Last Updated 28 ಮಾರ್ಚ್ 2023, 14:08 IST
ಅಕ್ಷರ ಗಾತ್ರ

ನವದೆಹಲಿ: ‘ನನ್ನ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲು ಲೋಸಕಭೆಯ ಕಾರ್ಯದರ್ಶಿ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ನನ್ನ ಸದಸ್ಯತ್ವವನ್ನು ಮರುಸ್ಥಾಪಿಸಲು ನಿರ್ದೇಶಿಸಬೇಕು’ ಎಂದು ಕೋರಿ ಲಕ್ಷದ್ವೀಪದ ಅನರ್ಹ ಸಂಸದ ಮೊಹಮ್ಮದ್‌ ಫೈಝಲ್‌ ಪಿ.ಪಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಆರಂಭಿಸಿದೆ.

‘ನನ್ನ ಸದಸ್ಯತ್ವ ಮರುಸ್ಥಾಪನೆ ಆಗಿಲ್ಲ. ಈ ಮೂಲಕ ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಫೈಝಲ್‌ ಪರ ವಕೀಲ ಕೆ. ಆರ್‌. ಸಸಿಪ್ರಭು ಅವರು ವಾದಿಸಿದರು.

ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠವು, ‘ಯಾವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಪ್ರಶ್ನಿಸಿತು.

‘ಕ್ಷೇತ್ರವನ್ನು ಪ್ರತಿನಿಧಿಸುವ ಹಕ್ಕನ್ನು ಉಲ್ಲಂಘಿಸಲಾಗಿದೆ’ ಎಂದು ವಕೀಲರು ಹೇಳಿದರು. ನಂತರ, ‘ಈ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ’ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತು.

ನ್ಯಾಯಾಲಯವು ಹೀಗೆ ಹೇಳುತ್ತಿದ್ದಂತೆಯೇ ಫೈಝಲ್‌ ಅವರ ಪರ ವಕೀಲರು ಕೆಲವು ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ‘ಕೊಲೆ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಈ ತಡೆಯನ್ನು ಪ್ರಶ್ನಿಸಿ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸಲ್ಲಿಸಿದ್ದ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿಯೇ ಇದೆ’ ಎಂದು ಹೇಳಿದರು. ಈ ಬಳಿಕ ನ್ಯಾಯಾಲಯವು, ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡುವುದಾಗಿ ಹೇಳಿತು.

‘ಸದಸ್ಯತ್ವವನ್ನು ಮರುಸ್ಥಾಪಿಸುವ ಸಂಬಂಧ ಏಳು ಬಾರಿ ಪತ್ರ ಬರೆಯಲಾಗಿದೆ. ಆದರೆ, ಲೋಕಸಭಾ ಕಾರ್ಯದರ್ಶಿಯು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT