ಮಂಗಳವಾರ, ಮೇ 24, 2022
22 °C

ಚೀನಾ ಗಡಿ ತಂಟೆ: ಗಾಲ್ವನ್ ಕಣಿವೆ ಸಂಘರ್ಷ, ಯೋಧರ ಬಲಿದಾನಕ್ಕೆ ವರ್ಷ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನ ಭಾರತ–ಚೀನಾ ಗಡಿ ಪ್ರದೇಶ ಗಾಲ್ವನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಘರ್ಷಣೆ ನಡೆದು ಇಂದಿಗೆ (ಜೂನ್ 15) ಒಂದು ವರ್ಷ. ಕಳೆದ ವರ್ಷ ನಡೆದಿದ್ದ ಘಟನೆಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು.

ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಭಾರತವು ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಯಾವುದೇ ಸಂಭವನೀಯತೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ವ ಸನ್ನದ್ಧವಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

ಗಾಲ್ವನ್ ಸಂಘರ್ಷವು ಚೀನಾ ಜತೆಗಿನ ನಡೆಯನ್ನು ಸ್ಪಷ್ಟಗೊಳಿಸಲು ಮತ್ತು ಭದ್ರತಾ ಬೆದರಿಕೆಗಳಿಗೆ ಸಂಬಂಧಿಸಿ ಅಲ್ಪಾವಧಿ, ದೀರ್ಘಾವಧಿಯ ಗುರಿಯನ್ನು ನಿಗದಿಪಡಿಸಿಕೊಳ್ಳಲು ಭಾರತಕ್ಕೆ ನೆರವಾಗಿದೆ ಎಂದೂ ಮೂಲಗಳು ಅಭಿಪ್ರಾಯ ಪಟ್ಟಿವೆ.

ಓದಿ: ಗಡಿ ಸಂಘರ್ಷ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?

ಕಳೆದ ವರ್ಷ ಜೂನ್ 15ರಂದು ನಡೆದ ಘರ್ಷಣೆಯು ಉಭಯ ದೇಶಗಳು ಗಡಿಯಲ್ಲಿ ಸೇನಾ ಪಡೆಗಳ ಜಮಾವಣೆ ಹೆಚ್ಚಿಸಲು ಕಾರಣವಾಗಿತ್ತು.

ಗಾಲ್ವನ್ ಘರ್ಷಣೆಯಲ್ಲಿ ಮೃತಪಟ್ಟ ಯೋಧರ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದ ಚೀನಾ, ಕಳೆದ ಫೆಬ್ರುವರಿಯಲ್ಲಿ ಐವರು ಯೋಧರು ಮೃತಪಟ್ಟ ಬಗ್ಗೆ ಮಾಹಿತಿ ಬಹಿರಂಗಪಡಿಸಿತ್ತು. ಆದರೆ, ಚೀನಾ ಕಡೆಯಲ್ಲಿ ಹೆಚ್ಚಿನ ಸಾವು–ನೋವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆ ಅಂದಾಜಿಸಿದೆ.

‘ಸೇನಾ ದೃಷ್ಟಿಯಿಂದ ನಾವು ಉತ್ತಮವಾಗಿ ಸಿದ್ಧರಾಗಿದ್ದೇವೆ. ಗಾಲ್ವನ್ ಕಣಿವೆ ಸಂಘರ್ಷವು ದೇಶದ ಉತ್ತರದ ಗಡಿಯಲ್ಲಿ ಭದ್ರತೆಗೆ ಆದ್ಯತೆ ನೀಡಲು ನಮಗೆ ನೆರವಾಯಿತು’ ಎಂದು ಮೂಲಗಳು ಹೇಳಿದೆ.

ಓದಿ: 

ಸೇನೆಯ ಮೂರೂ ಪಡೆಗಳ ನಡುವಣ ಒಗ್ಗಟ್ಟನ್ನು ಹೆಚ್ಚಿಸಲೂ ಘಟನೆ ನೆರವಾಗಿತ್ತು ಎಂದಿರುವ ಮೂಲಗಳು, ಎಲ್‌ಎಸಿಯಲ್ಲಿ ಭಾರತೀಯ ವಾಯುಪಡೆ ಮತ್ತು ಭೂ ಸೇನೆ ಜತೆಯಾಗಿ ಚೀನಾ ಸವಾಲನ್ನು ಎದುರಿಸಲು ಸಜ್ಜಾಗಿದ್ದನ್ನೂ ಉದಾಹರಿಸಿವೆ.

ಈ ಮಧ್ಯೆ, ಚೀನಾ ಕೂಡ ಆಯಕಟ್ಟಿನ ಪ್ರದೇಶಗಳಲ್ಲಿ ಅಸ್ತಿತ್ವ ಹೆಚ್ಚಿಸಿಕೊಂಡಿದೆ ಎನ್ನಲಾಗಿದೆ.

‘ದ್ವಿಪಕ್ಷೀಯ ಬಾಂಧವ್ಯದ ಮೇಲೂ ಪರಿಣಾಮ’

ಗಾಲ್ವನ್ ಕಣಿವೆ ಸಂಘರ್ಷವು ದ್ವಿಪಕ್ಷೀಯ ಬಾಂಧವ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಗೆ ತಿಳಿಸಿದ್ದರು.

ಓದಿ: 

ಗಾಲ್ವನ್ ಕಣಿವೆ ಸಂಘರ್ಷಕ್ಕೆ ಚೀನಾವೇ ನೇರ ಹೊಣೆಯೆಂದೂ ಭಾರತ ಹೇಳಿತ್ತು. ಬಳಿಕ ಉಭಯ ದೇಶಗಳ ವಿದೇಶಾಂಗ ಸಚಿವರು ಸೆಪ್ಟೆಂಬರ್ 10ರಂದು ಮಾಸ್ಕೊದಲ್ಲಿ ನಡೆದ ಸಭೆಯಲ್ಲಿ ಐದು ಅಂಶಗಳ ಪರಿಹಾರ ಸೂತ್ರಕ್ಕೆ ಸಮ್ಮತಿ ಸೂಚಿಸಿದ್ದರು.

ಸೇನಾ ಮಟ್ಟದಲ್ಲಿಯೂ ಕೆಲವು ಹಂತಗಳ ಮಾತುಕತೆ ನಡೆದಿತ್ತು. ಬಳಿಕ ಎರಡೂ ದೇಶಗಳು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಬಳಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.

ಓದಿ: ಚೀನಾಕ್ಕೆ ಹೊಂದಿಕೊಂಡಿರುವ ಅರುಣಾಚಲ ಗಡಿಯಲ್ಲಿ ಸನ್ನದ್ಧತೆ ಪರಿಶೀಲಿಸಿದ ಜ.ನರವಣೆ

ಆದರೂ, ಗಡಿ ಪ್ರದೇಶಗಳಲ್ಲಿ ಸೇನಾ ಸನ್ನದ್ಧತೆ ಮುಂದುವರಿದಿದೆ. ಚೀನಾಕ್ಕೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದ ಗಡಿಯಲ್ಲಿ ಯುದ್ಧ ಸನ್ನದ್ಧತೆಯನ್ನು ಇತ್ತೀಚೆಗಷ್ಟೇ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಪರಿಶೀಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು