ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದ ಆಸ್ತಿಗೆ ದೇವರೇ ಮಾಲೀಕ: ಸುಪ್ರೀಂ ಕೋರ್ಟ್

Last Updated 8 ಸೆಪ್ಟೆಂಬರ್ 2021, 1:15 IST
ಅಕ್ಷರ ಗಾತ್ರ

ನವದೆಹಲಿ: ದೇವಸ್ಥಾನದ ಆಸ್ತಿ ಮತ್ತು ಜಾಗವು ದೇವರಿಗೇ ಸೇರಿದ್ದರಿಂದ, ದೇವಾಲಯಕ್ಕೆ ಸಂಬಂಧಪಟ್ಟ ದಾಖಲೆಗಳು ದೇವರ ಹೆಸರಿನಲ್ಲಿ ಇರಬೇಕೇ ವಿನಾ ಪೂಜಾರಿಯ ಹೆಸರಿನಲ್ಲಿ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಹಾಗೂ ಎ.ಎಸ್‌.ಬೋಪಣ್ಣ ಅವರ ನ್ಯಾಯಪೀಠವು, ‘ದೇವಸ್ಥಾನದ ಆಸ್ತಿಗೆ ಸಂಬಂಧಪಟ್ಟಂತೆ ಪೂಜಾರಿ ಅಥವಾ ಅರ್ಚಕರ ಕೆಲಸವೇನಾದರೂ ಇದ್ದರೆ, ಅದು ಆ ಆಸ್ತಿಯ ನಿರ್ವಹಣೆ ಮಾತ್ರ’ ಎಂದು ಹೇಳಿದೆ.

‘ಭೂಮಾಲೀಕತ್ವದ ದಾಖಲೆಗಳಿಗೆ ಸಂಬಂಧಿಸಿದ ಕಾಲಂಗಳಲ್ಲಿ, ದೇವಸ್ಥಾನದ ದೇವರ ಹೆಸರನ್ನೇ ಬರೆಯಬೇಕು. ದೇವರೇ ಮಾಲೀಕನಾಗಿರುವುದರಿಂದ, ಸೇವಕರು ಅಥವಾ ವ್ಯವಸ್ಥಾಪಕರು ದೇವಸ್ಥಾನದಲ್ಲಿ ಕೆಲಸ ಮಾಡುವವರಷ್ಟೆ. ಅಲ್ಲಿ ನೆಲೆಸಿದ್ದಾರೆಂದ ಮಾತ್ರಕ್ಕೆ, ಅವರ ಹೆಸರನ್ನು ನಿವಾಸಿ/ಬಾಡಿಗೆದಾರರ ಕಾಲಂನಲ್ಲಿಯೂ ಸೇರಿಸಲಾಗದು’ ಎಂದೂ ಹೇಳಿದೆ.

‘ಪೂಜಾರಿಯು ಅಲ್ಲಿ ಬಾಡಿಗೆದಾರರೂ ಅಲ್ಲ: ಸರ್ಕಾರದಿಂದ ಜಾಗವನ್ನು ಗುತ್ತಿಗೆ/ಬಾಡಿಗೆ ಪಡೆದವರೂ ಅಲ್ಲ. ದೇವಸ್ಥಾನದ ಮಂಡಳಿ/ಟ್ರಸ್ಟ್‌ ಪರವಾಗಿ ಅಲ್ಲಿರುತ್ತಾರಷ್ಟೆ. ದೇವರ ಆಸ್ತಿ ನೋಡಿಕೊಳ್ಳಲು ಹಾಗೂ ಪೂಜಾ ವಿಧಿ–ವಿಧಾನ ನಿರ್ವಹಣೆಯ ಕೆಲ
ಸಕ್ಕೆ ಅನುಮತಿ ನೀಡಿ, ನಿಯೋಜಿಸಲಾಗಿರುತ್ತದೆ. ಒಂದು ವೇಳೆ ಆ ಕೆಲಸ ನಿರ್ವಹಿಸುವಲ್ಲಿ ವಿಫಲರಾದರೆ, ಆಗ ಹೊಣೆಯನ್ನೂ ವಾಪಸ್‌ ‍ಪಡೆಯಲಾಗುತ್ತದೆ’ ಎಂದು ಪೀಠ ಸ್ಪಷ್ಟಪಡಿಸಿದೆ.

‘ದೇವಾಲಯಗಳಿಗೆ ಸಂಬಂಧಿಸಿ, ಪೂಜಾರಿ ಅಥವಾ ವ್ಯವಸ್ಥಾಪಕನ ಹೆಸರನ್ನು ನಮೂದಿಸುವುದು ಕಡ್ಡಾಯ ಎಂದು ಹೇಳಿರುವ ಕಂದಾಯ ಇಲಾಖೆಯ ಯಾವ ದಾಖಲಾತಿಯನ್ನೂ ನಾವು ನೋಡಿಲ್ಲ. ರಾಜ್ಯದ ಅಧಿಕಾರ ವ್ಯಾಪ್ತಿಗೆ ಬರುವ ದೇವಸ್ಥಾನಗಳನ್ನು ಬಿಟ್ಟರೆ, ಜಿಲ್ಲಾಧಿಕಾರಿ ಕೂಡ ಎಲ್ಲ ದೇವಸ್ಥಾನಗಳ ವ್ಯವಸ್ಥಾಪಕ ಅಲ್ಲ’ ಎಂದು ಹೇಳಿದೆ.

ಮಧ್ಯಪ್ರದೇಶ ಕಂದಾಯ ಕಾನೂನು, 1959ರ ಅಡಿಯಲ್ಲಿ ಸರ್ಕಾರವು ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ, ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ನಡೆಸಿತು.

ದೇವಸ್ಥಾನದ ಆಸ್ತಿಯು ಅಕ್ರಮವಾಗಿ ಮಾರಾಟವಾಗುವುದನ್ನು ತಡೆಯಲು, ಕಂದಾಯ ಇಲಾಖೆಯ ದಾಖಲಾತಿಗಳಲ್ಲಿನ ಪೂಜಾರಿಗಳ ಹೆಸರನ್ನು ತೆಗೆದುಹಾಕಬೇಕು ಎಂದು ಮಧ್ಯಪ್ರದೇಶ ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT