ಬುಧವಾರ, ನವೆಂಬರ್ 25, 2020
25 °C

ಮಹಾರಾಷ್ಟ್ರ ಸರ್ಕಾರವು ತಾನಾಗಿಯೇ ಉರುಳುತ್ತದೆ: ದೇವೇಂದ್ರ ಫಡ್ನವಿಸ್

ಎಎನ್‌ಐ‌ Updated:

ಅಕ್ಷರ ಗಾತ್ರ : | |

Devendra Fadnavis

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ತಾನಾಗಿಯೇ ಉರುಳುತ್ತದೆ. ಬಿಜೆಪಿಯು ರಾಜ್ಯದ ಆಡಳಿತ ಬದಲಾವಣೆಯತ್ತ ಗಮನಹರಿಸದಿದ್ದರೂ ಕೂಡ ಅದು ಪರ್ಯಾಯ ಆಯ್ಕೆಯನ್ನು ಒದಗಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಈಗಿನ ಸನ್ನಿವೇಶದಲ್ಲಿ ನಾವು ಈ ಬಗ್ಗೆ ಮಾತನಾಡಿದರೆ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾದರೂ ಕೂಡ ನಾವು ಅಧಿಕಾರದತ್ತ ಗಮನಹರಿಸಿಲ್ಲ. ಈ ಮಹಾರಾಷ್ಟ್ರ ಸರ್ಕಾರ ಒಂದು ದಿನ ತಾನಾಗಿಯೇ ಕುಸಿಯಲಿದೆ ಎಂದು ಮಹಾರಾಷ್ಟ್ರ ರಾಜಕಾರಣದ ಮೇಲೆ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಪರಿಣಾಮದ ಕೇಳಿದ್ದಕ್ಕೆ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ರೀತಿಯ ಸರ್ಕಾರವು ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಯಾವಾಗ ಈ ಸರ್ಕಾರ ಬೀಳುತ್ತದೆಯೋ ಆಗ ನಾವು ಪರ್ಯಾಯ ಸರ್ಕಾರವನ್ನು ನೀಡುತ್ತೇವೆ. ಆದರೆ ಇಂದು ಅದು ನಮ್ಮ ಆದ್ಯತೆಯಾಗಿಲ್ಲ.

ಮಹಾರಾಷ್ಟ್ರದಲ್ಲಿ ದೊಡ್ಡದಾದ ಕೃಷಿ ಬಿಕ್ಕಟ್ಟು ಉಂಟಾಗಿದೆ. ರೈತರು ಆತಂಕಕ್ಕೊಳಗಾಗಿದ್ದಾರೆ. ಸರ್ಕಾರ ಅವರಿಗೆ ಆರ್ಥಿಕ ನೆರವು ನೀಡಿಲ್ಲ. ವಿರೋಧ ಪಕ್ಷವಾಗಿರುವುದರಿಂದ ನಾವು ರೈತರೊಂದಿಗೆ ಇದ್ದು ಸರ್ಕಾರವನ್ನು ಪ್ರಶ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿನ ಗೆಲುವು ರಾಷ್ಟ್ರ ರಾಜಕಾರಣ ಮಾತ್ರವಲ್ಲದೆ 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ. ಆಗ ಬಂಗಾಳದಲ್ಲಿ ಬದಲಾವಣೆಯ ಗಾಳಿಯನ್ನು ನೋಡಬಹುದು. ಬಂಗಾಳದಲ್ಲಿ ಚುನಾವಣೆ ಬಳಿಕ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಗೆ ಬಿಜೆಪಿಯಿಂದ ಮತದಾನದ ಉಸ್ತುವಾರಿ ವಹಿಸಿಕೊಂಡಿದ್ದ ಫಡ್ನವೀಸ್, ರಾಜ್ಯದಲ್ಲಿ ಎನ್‌ಡಿಎ ಸರ್ಕಾರದ ಪರವಾದ ವಾತಾವರಣವಿದೆ. ಜನರು ಮೋದಿ ಜಿ ಅವರನ್ನು ನಂಬುತ್ತಾರೆ ಮತ್ತು ಎನ್‌ಡಿಎಗೆ ಮತ ಹಾಕಿದರು. ನಿತೀಶ್ ಕುಮಾರ್ ಅವರ ಉತ್ತಮ ಚಿತ್ರಣವೂ ನಮಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ.

ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಅವರು ನಮ್ಮೊಂದಿಗೆ ಇರಲಿಲ್ಲ, ಆದರೆ ನಾವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದೇವೆ. ನಮ್ಮ ಮೈತ್ರಿ ಸರ್ಕಾರ ರಚಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಎನ್‌ಡಿಎ 125 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಈ ಪೈಕಿ ಬಿಜೆಪಿ 74 ಸ್ಥಾನಗಳಲ್ಲಿ ಮತ್ತು ಜೆಡಿಯು 43 ಸ್ಥಾನಗಳಲ್ಲಿ, ವಿಕಾಸಶೀಲ ಇನ್ಸಾನ್ ಪಾರ್ಟಿ 4 ಮತ್ತು ಹಿಂದುಸ್ಥಾನಿ ಅವಾಮ್ ಮೋರ್ಚಾ 4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಮಹಾಗಠಬಂಧನ್ ಮೈತ್ರಿಯು 110 ಸ್ಥಾನಗಳಲ್ಲಿ ಜಯಗಳಿದೆ. ಅದರಲ್ಲಿ ಆರ್‌ಜೆಡಿ 75, ಕಾಂಗ್ರೆಸ್ 19 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು