ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

576 ಮಾತೃಭಾಷೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಸರ್ಕಾರ

Last Updated 8 ನವೆಂಬರ್ 2022, 6:04 IST
ಅಕ್ಷರ ಗಾತ್ರ

ನವದೆಹಲಿ: ದೇಶದ 576 ಮಾತೃಭಾಷೆಗಳ ಸಮೀಕ್ಷೆ ಮತ್ತು ಕ್ಷೇತ್ರೀಯ ವಿಡಿಯೊಗ್ರಫಿಯನ್ನು ಕೇಂದ್ರ ಗೃಹ ಸಚಿವಾಲಯ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಲ್ಲಿ, ಭಾಷೆಯೊಂದಿಗೆ ಅದರ ಉಪ ಭಾಷೆಗಳ ಸಮೀಕ್ಷೆಯೂ ನಡೆದಿದೆ.

ಪ್ರತಿ ಸ್ಥಳೀಯ ಮಾತೃಭಾಷೆಯ ಅಸ್ಮಿತೆಯನ್ನು ಸಂರಕ್ಷಿಸಲು ಮತ್ತು ವಿಶ್ಲೇಷಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ವೆಬ್ ದಸ್ತಾವೇಜು (ಆರ್ಕೈವ್‌) ಸ್ಥಾಪಿಸಲು ಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಈ ಉದ್ದೇಶಕ್ಕಾಗಿ, ಆಂತರಿಕ ಭಾಷಾಶಾಸ್ತ್ರಜ್ಞರಿಂದ ಭಾಷಾ ದತ್ತಾಂಶಗಳ ಜೋಡಣೆ ಮತ್ತು ಸಂಪಾದನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅದು ಹೇಳಿದೆ.

‘ಭಾರತದ ಮಾತೃಭಾಷಾ ಸಮೀಕ್ಷೆ (ಎಮ್‌ಟಿಎಸ್‌ಐ) ಯೋಜನೆಯು 576 ಮಾತೃಭಾಷೆಗಳ ಕ್ಷೇತ್ರೀಯ ವೀಡಿಯೊಗ್ರಫಿಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ’ ಎಂದು ವರದಿ ಹೇಳಿದೆ.

ದೇಶದ 6ನೇ ಪಂಚವಾರ್ಷಿಕ ಯೋಜನೆಯಿಂದಲೂ ಭಾರತದಲ್ಲಿ ಭಾಷಾ ಸಮೀಕ್ಷೆ (ಎಲ್‌ಎಸ್‌ಐ) ನಿಯಮಿತ ಸಂಶೋಧನಾ ಚಟುವಟಿಕೆಯಾಗಿ ನಡೆದುಕೊಂಡು ಬಂದಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಈ ಯೋಜನೆಯಡಿಯಲ್ಲಿನ ಹಿಂದಿನ ಪ್ರಕಟಣೆಗಳ ಮುಂದುವರಿದ ಭಾಗವಾಗಿ ಜಾರ್ಖಂಡ್‌ನ ಸಂಪುಟವನ್ನು ಪೂರ್ಣಗೊಳಿಸಲಾಗಿದೆ. ಹಿಮಾಚಲ ಪ್ರದೇಶದ ಸಮೀಕ್ಷೆಯೂ ಪೂರ್ಣಗೊಳ್ಳುತ್ತಿದೆ. ತಮಿಳುನಾಡು ಮತ್ತು ಉತ್ತರ ಪ್ರದೇಶದ ಕ್ಷೇತ್ರಕಾರ್ಯ ನಡೆಯುತ್ತಿದೆ ಎಂದು ಇಲಾಖೆ ತಿಳಿಸಿದೆ.

ದಸ್ತಾವೇಜು ಉದ್ದೇಶಗಳಿಗಾಗಿ ವೀಡಿಯೊಗ್ರಾಫ್ ಮಾಡಿದ ಮಾತೃಭಾಷೆಗಳ ಭಾಷಣದ ಡೇಟಾವನ್ನು ಎನ್‌ಐಸಿ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ವರದಿ ತಿಳಿಸಿದೆ.

ಇನ್ನು ಮುಂಬರುವ ಜನಗಣತಿಯ ಬಗ್ಗೆಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ತಡೆಹಿಡಿಯಲಾಗಿದ್ದ ರಾಷ್ಟ್ರೀಯ ಜನಗಣತಿಯಲ್ಲಿ, ಸುಧಾರಿತ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಬಳಕೆ ಮಾಡಲಾಗುತ್ತದೆ. ಅತಿ ದೊಡ್ಡ ಗಣತಿ ಕಾರ್ಯವನ್ನು ಸುಗಮವಾಗಿ ನಡೆಸಲು ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT