ಶನಿವಾರ, ಸೆಪ್ಟೆಂಬರ್ 18, 2021
23 °C

ಅಸ್ಸಾಂ: ಬಂಡುಕೋರರ ಜತೆ ಶಾಂತಿ ಒಪ್ಪಂದಕ್ಕೆ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈಶಾನ್ಯ ರಾಜ್ಯದ ಕರ್ಬಿ-ಆಂಗ್ಲಾಂಗ್ ಪ್ರದೇಶಕ್ಕೆ ಸ್ವಾಯತ್ತತೆ ನೀಡುವುದನ್ನು ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಅಸ್ಸಾಂನ ಐದು ಬಂಡುಕೋರರ ಗುಂಪುಗಳು ಶನಿವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಸಮ್ಮುಖದಲ್ಲಿ ಸಹಿ ಹಾಕಲಾದ ಕಾರ್ಬಿ-ಆಂಗ್ಲಾಂಗ್ ಶಾಂತಿ ಒಪ್ಪಂದವು, ಅಸ್ಸಾಂನ ಪ್ರಮುಖ ಜನಾಂಗೀಯ ಸಮುದಾಯವಾದ ಕಾರ್ಬಿಯ ಬಂಡಾಯಕ್ಕೆ ಔಪಚಾರಿಕವಾಗಿ ತೆರೆ ಎಳೆದಿದೆ.
ಈ ಜನಾಂಗವು ಮೂರು ದಶಕಗಳಿಂದ ಹತ್ಯೆ, ಜನಾಂಗೀಯ ಹಿಂಸೆ, ಅಪಹರಣ ಪ್ರಕರಣಗಳಿಂದ ಗುರುತಿಸಲ್ಪಟ್ಟಿತ್ತು.

ಐದು ಸಂಘಟನೆಗಳಾದ ಪೀಪಲ್ಸ್ ಡೆಮಾಕ್ರಟಿಕ್ ಕೌನ್ಸಿಲ್ ಆಫ್ ಕಾರ್ಬಿ ಲಾಂಗ್ರಿ (ಪಿಡಿಸಿಕೆ), ಕರ್ಬಿ ಲಾಂಗ್ರಿ ಉತ್ತರ ಕ್ಯಾಚಾರ್ ಹಿಲ್ಸ್ ಲಿಬರೇಶನ್ ಫ್ರಂಟ್ (ಕೆಎಲ್‌ಎನ್‌ಎಲ್‌ಎಫ್‌), ಕರ್ಬಿ ಪೀಪಲ್ಸ್ ಲಿಬರೇಶನ್ ಟೈಗರ್ಸ್ (ಕೆಪಿಎಲ್‌ಟಿ), ಕುಕಿ ಲಿಬರೇಶನ್ ಫ್ರಂಟ್ (ಕೆಎಲ್‌ಎಫ್‌) ಮತ್ತು ಯುನೈಟೆಡ್ ಪೀಪಲ್ಸ್ ಲಿಬರೇಶನ್ ಆರ್ಮಿಯ (ಯುಪಿಎಲ್‌ಎ) 1,000ಕ್ಕೂ ಹೆಚ್ಚು ಬಂಡುಕೋರರು ಕಳೆದ ಫೆಬ್ರವರಿಯಲ್ಲಿ ಅಸ್ಸಾಂ ಸರ್ಕಾರದ ಮುಂದೆ ಶರಣಾಗಿದ್ದರು.

ಕರ್ಬಿ ಆಂಗ್ಲಾಂಗ್‌ಗೆ ₹1,000 ಕೋಟಿಯ ಅಭಿವೃದ್ಧಿ ಪ್ಯಾಕೇಜ್ ನೀಡಲಾಗುವುದು ಮತ್ತು ಶಾಂತಿ ಒಪ್ಪಂದವನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಗೃಹಸಚಿವ ಅಮಿತ್ ಶಾ ಹೇಳಿದರು.

ಕಾರ್ಬಿ ಜನರ ಅಸ್ಮಿತೆ, ಭಾಷೆ, ಸಂಸ್ಕೃತಿಯ ರಕ್ಷಣೆಯನ್ನು ಈ ಶಾಂತಿ ಒಪ್ಪಂದವು ಖಚಿತಪಡಿಸುತ್ತದೆ. ‘ನಾವು ಶಾಂತಿ ಒಪ್ಪಂದಗಳಿಗೆ ಸಹಿ ಹಾಕುವುದು ಮಾತ್ರವಲ್ಲ, ನಿಗದಿತ ಸಮಯದಲ್ಲಿ ಅವುಗಳನ್ನು ಜಾರಿಗೊಳಿಸುತ್ತೇವೆ‘ ಎಂದರು.

ಈಶಾನ್ಯದ ಇತರ ಬಂಡುಕೋರ ಗುಂಪುಗಳಾದ ಎಎನ್‌ಡಿಎಫ್‌ಬಿ, ಎನ್‌ಎಲ್‌ಎಫ್‌ಟಿ ಮತ್ತು ಬ್ರೂ ಗುಂಪುಗಳೊಂದಿಗೆ ಇದೇ ರೀತಿಯ ಶಾಂತಿ ಒಪ್ಪಂದಗಳ ಉದಾಹರಣೆಯನ್ನು ಅವರು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು