ಗುರುವಾರ , ಫೆಬ್ರವರಿ 25, 2021
28 °C

ಕೃಷಿ ಕಾಯ್ದೆ 1.5 ವರ್ಷ ಅಮಾನತು ರೈತರಿಗೆ ನೀಡಿರುವ 'ಅತ್ಯುತ್ತಮ ಕೊಡುಗೆ': ತೋಮರ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಾದಿತ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ಒಂದರಿಂದ ಒಂದುವರೆ ವರ್ಷಗಳ ವರೆಗೆ ಅಮಾನತಿನಲ್ಲಿಡುವ ಸರ್ಕಾರದ ಪ್ರಸ್ತಾಪವು ರೈತರಿಗೆ ನೀಡಿರುವ 'ಅತ್ಯುತ್ತಮ ಕೊಡುಗೆ'ಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ತಿಳಿಸಿದರು.

ಅಲ್ಲದೆ ಈ ಕುರಿತಾಗಿ ಪ್ರತಿಭಟನಾ ನಿರತ ರೈತರು ಶೀಘ್ರದಲ್ಲೇ ಮರುಪರಿಶೀಲಿಸಿ ತಮ್ಮ ನಿರ್ಧಾರವನ್ನು ತಿಳಿಸಲಿ ಎಂದು ಆಶಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳುಗಳಿಂದ ದೆಹಲಿ ಹಾಗೂ ಹರಿಯಾಣದ ವಿವಿಧ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆಗೆ 11 ಸುತ್ತಿನ ಚರ್ಚೆ ನಡೆಸಿದರೂ ಪ್ರತಿಭಟನಾ ನಿರತ 41 ರೈತ ಸಂಘಟನೆಗಳು ತಮ್ಮ ನಿಲುವಿನಲ್ಲಿ ಅಚಲವಾಗಿದ್ದಾರೆ.

10ನೇ ಸುತ್ತಿನ ಮಾತುಕತೆಯ ವೇಳೆಯಲ್ಲಿ, ನಿಲುವನ್ನು ಸಡಿಲಗೊಳಿಸಿರುವ ಸರ್ಕಾರವು ಒಂದರಿಂದ ಒಂದು ವರೆ ವರ್ಷದ ವರೆಗೆ ಕೃಷಿ ಕಾಯ್ದೆಯನ್ನು ಅಮಾನತಿನಲ್ಲಿಡುವ ಪ್ರಸ್ತಾಪವನ್ನು ಮುಂದಿರಿಸಿತ್ತು. ಇದನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದವು.

ಬಳಿಕ 11ನೇ ಸುತ್ತಿನ ಮಾತುಕತೆಯಲ್ಲಿ, ಈ ಪ್ರಸ್ತಾಪವನ್ನು ಮರುಪರಿಶೀಲಿಸಲು ಮತ್ತು ಈ ಕುರಿತಾಗಿ ಅಂತಿಮ ನಿರ್ಧಾರ ತಳೆಯಲು ರೈತ ಸಂಘಟನೆಗಳಿಗೆ ಸರ್ಕಾರ ತಿಳಿಸಿತ್ತು.

ರೈತ ಸಂಘಟನೆಗಳಿಗೆ ಸರ್ಕಾರವು ಅತ್ಯುತ್ತಮ ಕೊಡುಗೆಯನ್ನೇ ಮುಂದಿಟ್ಟಿದೆ. ಅವರೊಳಗೆ ಚರ್ಚಿಸಿದ ಬಳಿಕ ನಮಗೆ ನಿರ್ಧಾರವನ್ನು ತಿಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಅವರು ತಿಳಿಸಿದ ಬಳಿಕ ನಾವಿದನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದು ಕೇಂದ್ರ ಸಚಿವರು ತಿಳಿಸಿದರು.

ಇದನ್ನೂ ಓದಿ: 

11 ಸುತ್ತಿನ ಮಾತುಕತೆಯ ಬಳಿಕ ಇನ್ನು ಹೆಚ್ಚಿನ ಚರ್ಚೆ ನಡೆಯುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಹಾಗಿದ್ದರೂ ಸರ್ಕಾರ ನೀಡಿರುವ ಅಂತಿಮ ಪ್ರಸ್ತಾಪದ ಕುರಿತಾಗಿ ರೈತರ ಅಂತಿಮ ನಿರ್ಧಾರಕ್ಕಾಗಿ ಭೇಟಿ ಮಾಡಲು ತಯಾರಿರುವುದಾಗಿ ತಿಳಿಸಿದ್ದರು.

ಈಗ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿರುವ 'ಕಿಸಾನ್ ಗಣತಂತ್ರ ಪರೇಡ್' ಅಥವಾ ಟ್ರ್ಯಾಕ್ಟರ್ ಜಾಥಾ ಬಳಿಕ ರೈತರು ತಮ್ಮ ಅಂತಿಮ ನಿರ್ಧಾರ ಘೋಷಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಏತನ್ಮಧ್ಯೆ ಕೃಷಿ ಕಾಯ್ದೆ ಸಂಬಂಧ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಮಿತಿಯು ಜನವರಿ 27ರಂದು ರೈತರು ಹಾಗೂ ಕೃಷಿ ಸಂಘಟನೆಗಳೊಂದಿಗೆ ಎರಡನೇ ಸುತ್ತಿನ ಸಮಾಲೋಚನೆ ನಡೆಸಲಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ದೆಹಲಿ ಗಡಿಯಲ್ಲಿ ಬೀಡು ಬಿಟ್ಟಿರುವ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ಪಶ್ಚಿಮ ಭಾಗದ ಸಾವಿರಾರು ರೈತರು ನವೆಂಬರ್ 26ರಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು