ಮಂಗಳವಾರ, ಮಾರ್ಚ್ 2, 2021
21 °C

ರೈತರಿಂದ ಕೃಷಿ ಕಾಯ್ದೆಗಳ ನಿರ್ನಾಮ; ಕೇಂದ್ರವನ್ನು ಎಚ್ಚರಿಸಿದ ಪವಾರ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಹುಮತದ ಬಲದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಯಾವುದೇ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬಹುದು. ಆದರೆ ಒಮ್ಮೆ ಜನ ಸಾಮಾನ್ಯ ಹಾಗೂ ರೈತರು ಎಚ್ಚೆತ್ತುಕೊಂಡರೆ ಹೊಸ ಕೃಷಿ ಕಾಯ್ದೆ ಮತ್ತು ಕೇಂದ್ರ ಸರ್ಕಾರವನ್ನು ನಿರ್ನಾಮ ಮಾಡುವವರೆಗೂ ಸುಮ್ಮನಿರುವುದಿಲ್ಲ ಎಂದು ಎನ್‌ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಸೋಮವಾರ ಎಚ್ಚರಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ ಸ್ಥಿತಿಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ವಿಚಾರಿಸಿಲ್ಲ ಎಂದು ಮಾಜಿ ಕೇಂದ್ರ ಕೃಷಿ ಸಚಿವರೂ ಆಗಿರುವ ಪವಾರ್ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಚಳವಳಿ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಮುಂಬೈನಲ್ಲಿ ಹಮ್ಮಿಕೊಂಡಿಕೊಂಡಿರುವ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ರೈತರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ನಿವೇದನಾ ಪತ್ರ ಸಲ್ಲಿಸಲು ಮುಂದಾಗಿದ್ದ ರಾಜ್ಯಪಾಲರು ಗೋವಾಕ್ಕೆ ತೆರಳಿರುವುದು ವಿವಾದಕ್ಕೆ ಕಾರಣವಾಗಿದೆ. ಗೋವಾದ ಹೆಚ್ಚುವರಿ ಹೊಣೆ ಹೊತ್ತಿರುವ ಕೋಶ್ಯಾರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಭೇಟಿ ಮಾಡಲು ಸಮಯವಿದೆ. ಆದರೆ ರೈತರಿಗಾಗಿ ಸಮಯವಿಲ್ಲಎಂದು ಟೀಕಿಸಿದರು.

ಇದನ್ನೂ ಓದಿ: 

ಮಹಾರಾಷ್ಟ್ರದ ಇತಿಹಾಸದಲ್ಲಿ ಇಂತಹ ರಾಜ್ಯಪಾಲರನ್ನು ನಾವೆಂದು ನೋಡಿಲ್ಲ. ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ಇಂದು ರಾಜ್ಯಪಾಲರಿಗೆ ನಿವೇದನಾ ಪತ್ರ ಸಲ್ಲಿಸಬೇಕಿತ್ತು. ಆದರೆ ಅವರು ಗೋವಾಕ್ಕೆ ತೆರಳಿದ್ದಾರೆ. ಅವರಿಗೆ ಕಂಗನಾಳರನ್ನು ಭೇಟಿಯಾಗಲು ಸಮಯವಿದೆ. ಆದರೆ ರೈತರನ್ನಲ್ಲ. ರೈತರನ್ನು ಭೇಟಿ ಮಾಡುವುದು ರಾಜ್ಯಪಾಲರ ನೈತಿಕ ಜವಾಬ್ದಾರಿ. ಆದರೆ ಆ ಕರ್ತವ್ಯದಿಂದ ವಿಚಲಿತರಾಗಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನವನ್ನು ದುರ್ಬಲಗೊಳಿಸುವ ಸಂಸತ್ತಿನ ಕೀರ್ತಿಯನ್ನು ಹಾಳು ಮಾಡುವ ಹಾಗೂ ಸಂಸದೀಯ ವ್ಯವಸ್ಥೆಯನ್ನು ನಾಶಗೊಳಿಸುವ ಕಾನೂನನ್ನು ಬಹುಮತದ ಬೆಂಬಲದಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿರಬಹುದು. ಆದರೆ ಒಂದು ವಿಷಯವನ್ನು ನೆನಪಿಡಿ. ಒಮ್ಮೆ ದೇಶದ ಜನ ಸಾಮಾನ್ಯ ಮತ್ತು ರೈತರು ಎಚ್ಚೆತ್ತುಕೊಂಡರೆ, ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತೀರೋ ಇಲ್ಲವೋ, ಅವರು ನಿಮ್ಮನ್ನು ಮತ್ತು ನಿಮ್ಮ ಕಾಯ್ದೆಗಳನ್ನು ನಿರ್ನಾಮ ಮಾಡುವವರೆಗೂ ಸುಮ್ಮನಿರುವುದಿಲ್ಲ ಎಂದು ಪವಾರ್ ಎಚ್ಚರಿಸಿದರು.

ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ರೈತರು ದೆಹಲಿ ಬಳಿ ಪ್ರತಿಭಟನೆ ನಡೆಸಿ 60 ದಿನಗಳು ಕಳೆದಿವೆ. ಆದರೆ ದೇಶದ ಪ್ರಧಾನಿ ರೈತರ ಬಗ್ಗೆ ವಿಚಾರಿಸಿದ್ದಾರೆಯೇ? ರೈತರು ಪಂಜಾಬ್ ಮೂಲದವರು ಎಂದು ಹೇಳಲಾಗಿದೆ. ಪಂಜಾಬ್ ಅಂದರೆ ಪಾಕಿಸ್ತಾನವೇ? ಎಂದು ಪವಾರ್ ಪ್ರಶ್ನೆ ಮಾಡಿದರು.

ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸದೇ ವಿವಾದಿತ ಕೃಷಿ ಕಾಯ್ದೆಗಳನ್ನು ಅಂಗೀಕರಿಸಲಾಗಿದೆ ಎಂದು ಶರದ್ ಪವಾರ್ ಆರೋಪಿಸಿದರು. ಮಸೂದೆಗಳನ್ನು ಆಯ್ದ ಸಮಿತಿಯು ಚರ್ಚಿಸಬಹುದಿತ್ತು. ಆದರೆ ಹಾಗಾಗಲಿಲ್ಲ. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಚರ್ಚೆ ನಡೆಸದೇ ಅಂಗೀಕರಿಸಲಾಗಿದೆ. ಇದು ಸಂವಿಧಾನಕ್ಕೆ ಆದ ಅವಮಾನ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು